ಕಾರ್ಕಳದ ಜಿಎಸ್‌ಬಿ ಶೈಲಿ ಊಟಕ್ಕೆ ಮಾರು ಹೋಗಿದ್ದ ಝಾಕಿರ್‌!

| Published : Dec 17 2024, 01:00 AM IST

ಸಾರಾಂಶ

ತಬಲ ಮಾಂತ್ರಿಕ ಝಾಕಿರ್ ಹುಸೇನ್ ಅವರು ಸಂಗೀತ ಕಾರ್ಯಕ್ರಮಕ್ಕೆ ಕಾರ್ಕಳಕ್ಕೆ ಒಮ್ಮೆ ಬಂದಿದ್ದು, ಇಲ್ಲಿನ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಾಂಪ್ರದಾಯಿಕ ಶೈಲಿಯ ಅಡುಗೆಗೆ ಮಾರು ಹೋಗಿದ್ದರು. ಮಧ್ಯಾಹ್ನ ಅವರಿಗೆ ನೀಡಿದ್ದ ಮೆನುವನ್ನೇ ರಾತ್ರಿಯೂ ಪುನರಾವರ್ತಿಸಿದ್ದರು. ಅದರಲ್ಲೂ ಇಲ್ಲಿನ ಪತ್ರೊಡೆಯನ್ನು ಪಾರ್ಸೆಲ್‌ ಕೂಡ ಮಾಡಿಸಿದ್ದರು.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳತಬಲ ಮಾಂತ್ರಿಕ ಝಾಕಿರ್ ಹುಸೇನ್ ಅವರು ಸಂಗೀತ ಕಾರ್ಯಕ್ರಮಕ್ಕೆ ಕಾರ್ಕಳಕ್ಕೆ ಒಮ್ಮೆ ಬಂದಿದ್ದು, ಇಲ್ಲಿನ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಾಂಪ್ರದಾಯಿಕ ಶೈಲಿಯ ಅಡುಗೆಗೆ ಮಾರು ಹೋಗಿದ್ದರು. ಮಧ್ಯಾಹ್ನ ಅವರಿಗೆ ನೀಡಿದ್ದ ಮೆನುವನ್ನೇ ರಾತ್ರಿಯೂ ಪುನರಾವರ್ತಿಸಿದ್ದರು. ಅದರಲ್ಲೂ ಇಲ್ಲಿನ ಪತ್ರೊಡೆಯನ್ನು ಪಾರ್ಸೆಲ್‌ ಕೂಡ ಮಾಡಿಸಿದ್ದರು.

ಕಾರ್ಕಳ ಸಂಗೀತ ಸಭಾದ ವತಿಯಿಂದ ನಡೆಸಲಾದ ಐದನೇ ವರ್ಷದ ರಾಷ್ಟ್ರೀಯ ಮಟ್ಟದ ‘ಪಂಚಮ ಇಂಚರ’ ಸಂಭ್ರಮಾಚರಣೆಯ ಸಂದರ್ಭ ಮಂಜುನಾಥ್ ಪೈ ಹಾಲ್‌ ಬಳಿಯ ತೆರೆದ ಸಭಾಂಗಣದಲ್ಲಿ 1997ರ ಫೆ.4ರಂದು ಝಾಕಿರ್‌ ಹುಸೇನ್‌ ಕಛೇರಿ ನೀಡಿದ್ದರು.

ಕಾರ್ಕಳದಲ್ಲಿ ಏರ್ಪಡಿಸಿದ್ದ ಪಂಚಮ ಇಂಚರ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರು ವಿಮಾನ ನಿಲ್ದಾಣನಿಂದ ನೇರವಾಗಿ ಮಣಿಪಾಲದ ಹೊಟೇಲಿಗೆ ಆಗಮಿಸಿ ಬಳಿಕ ಕಾರ್ಕಳದ ಸುಹಾಗ್ ಹೊಟೇಲ್‌ನಲ್ಲಿ ಅರ್ಧ ದಿನ ತಂಗಿದ್ದರು. ಈ ಸಂದರ್ಭ ಹಾಡುಗಾರಿಕೆ ಅಭ್ಯಾಸವನ್ನು ಕೂಡ ಸಂಗಡಿಗರೊಂದಿಗೆ ಸೇರಿಕೊಂಡು ಮಾಡುತ್ತಿದ್ದರು. ಝಾಕಿರ್ ಕಾರ್ಯಕ್ರಮ ನೋಡಲು ರಾಜ್ಯ ವಿವಿಧೆಡೆಯಿಂದ ಸಾವಿರಾರು ಜನರು ಅಗಮಿಸಿದ್ದು, ತೆರೆದ ಸಭಾಂಗಣ ಕಿಕ್ಕಿರಿದು ತುಂಬಿತ್ತು.ಅಡುಗೆಗೆ ಫಿದಾ: ಕಾರ್ಯಕ್ರಮಕ್ಕೆ ಬಂದಿದ್ದ ಝಕಿರ್‌ ಹುಸೇನ್, ಕಾರ್ಕಳದ ಜಿಎಸ್‌ಬಿ ಶೈಲಿಯ ಸಾಂಪ್ರದಾಯಿಕ ಅಡುಗೆ ರುಚಿಗೆ ಮಾರು ಹೋಗಿದ್ದರು. ಅಂದು ಮಧ್ಯಾಹ್ನ ಅಲಸಂಡೆ ಬಟಾಟೆ ಉಪ್ಕರಿ, ಪತ್ರೋಡೆ, ದಾಲ್ ತೋವ್ವೆ, ಅನ್ನ ಹಾಗೂ ದೀವಿಹಲಸು ಪೋಡಿ ನೀಡಲಾಗಿತ್ತು. ಇದರ ರುಚಿ ಸವಿದ ಅವರು, ರಾತ್ರಿಯೂ ಈ ಅಡುಗೆಯನ್ನೆ ಪೂರೈಸಲು ತಿಳಿಸಿದ್ದರು. ಊರಿಗೆ ತೆರಳುವ ಸಂದರ್ಭ ಪತ್ರೋಡೆಯನ್ನು ಪಾರ್ಸೆಲ್ ಕೂಡ ಕೊಂಡೊಯ್ದಿದ್ದರು.ವಯೋಲಿನ್ ನುಡಿಸುವ ಕಲಾವಿದ ಬಂದಿರಲಿಲ್ಲ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಝಾಕಿರ್‌ ಹುಸೇನ್ ಕಾರ್ಯಕ್ರಮಕ್ಕೆ ವಯೋಲಿನ್ ನುಡಿಸಲು ಅವರ ಖಾಯಂ ಪಕ್ಕವಾದ್ಯದವರು ಬಂದಿರಲಿಲ್ಲ, ಆ ವೇಳೆ ಝಾಕಿರ್‌ ಹುಸೇನ್‌ ಅವರೇ ಕೇರಳ ಮೂಲದ ಖ್ಯಾತ ವಯೋಲಿನ್ ವಾದಕ ಹಾಗೂ ಮಂಗಳೂರು ಆಕಾಶವಾಣಿ ನಿಲಯ ಕಲಾವಿದ ಟಿ.ಜಿ. ಗೋಪಾಲಕೃಷ್ಣ ಅವರನ್ನು ಕರೆಸಿದ್ದರು. ಅಂದು ವಾಚಸ್ಪತಿ ರಾಗದಲ್ಲಿ ವಯೋಲಿನ್ ನುಡಿಸಿ ಕಾರ್ಯಕ್ರಮ ಯಶಸ್ವಿಯಾಗಿತ್ತು. ಕಾರ್ಕಳ ಸಂಗೀತ ಸಭಾದ ಐದನೇ ವರ್ಷ ತುಂಬಿದ್ದ ವೇಳೆಯಲ್ಲಿ ಪಂಚಮ ಇಂಚರ ಪುಸ್ತಕವನ್ನು ಕೂಡ ಝಾಕಿರ್ ಹುಸೇನ್‌ ಬಿಡುಗಡೆ ಮಾಡಿದ್ದರು.

ಅಂದಿನ ಕಾರ್ಯಕ್ರಮಕ್ಕೆ ಹಾರ್ಮೋನಿಯಂಗೆ ಸುಧೀರ್ ನಾಯಕ್, ಮಂಗಳೂರು ಆಕಾಶವಾಣಿಯ ಕಲಾವಿದ ಟಿ.ಜಿ. ಗೋಪಾಲಕೃಷ್ಣ, ಕಾರ್ಕಳದ ಮೀರಾ ಶೆಣೈ ಸಾಥ್ ನೀಡಿದ್ದರು.ಕಾರ್ಕಳದ ಸಂಗೀತ ಸಭಾ ಕಾರ್ಯಕ್ರಮದಲ್ಲಿ ಪ್ರವೀಣ್ ಗೋಡ್ಖಿಂಡಿ, ಸಲೀಲ್ ಭಟ್, ಸಂದೀಪ್ ಚಟರ್ಜಿ, ಚಂದನ್ ಕುಮಾರ್, ಶೌನಕ್ ಅಭಿಷೇಕಿ ಮತ್ತು ಸುಮೇಧಾ ದೇಸಾಯಿ ವಿದ್ಯಾಭೂಷಣ, ಉಲ್ಲಾಸ್ ಬಾಪಟ್, ಅಜಿತ್ ಕಡಕಡೆ, ರೋಣು ಮುಜುಂದಾರ್, ವಿಶ್ವಮೋಹನ್ ಭಟ್, ರಾಜ್‌ಕುಮಾರ್ ಭಾರತಿ, ವಿಠಲ್ ರಾಮಮೂರ್ತಿ, ಎಂ.ರಮಣಿ, ಶ್ರೀನಾಥ್ ಮರಾಠೆ, ಮ್ಯಾಂಡೋಲಿನ್ ಶ್ರೀನಿವಾಸ್, ಸುಧಾ ರಘುನಾಥನ್, ಪರ್ವಿನ್ ಸುಲ್ತಾನ, ಪಂ. ಹರಿಪ್ರಸಾದ್ ಚೌರಾಸಿಯಾ, ಶುಭಾ ಮುದ್ಗಲ್, ಜೇಸುದಾಸ್, ಎಂ.ಎಸ್.ಗೋಪಾಲಕೃಷ್ಣನ್, ನಿತ್ಯಶ್ರೀ ಮಹದೇವನ್, ನಾಕೋಡ್ ಬ್ರದರ್ಸ್, ತರುಣ್ ಭಟ್ಟಾಚಾರ್ಯ, ಬಾಂಬೆ ಜಯಶ್ರೀ, ಅಭಿಷೇಕ್ ರಘುರಾಮನ್, ಸಲೀಲ್ ಭಟ್, ಮೈಸೂರು ಮಂಜುನಾಥ್ ಮತ್ತು ನಾಗರಾಜ್ ಸೇರಿದಂತೆ ಅನೇಕರು ಸಂಗೀತ ಪ್ರದರ್ಶನ ನೀಡಿದ್ದಾರೆ.ಖ್ಯಾತ ಹಿಂದೂಸ್ತಾನಿ ಗಾಯಕಿ ಮಹಾಲಕ್ಷ್ಮಿ ಶೆಣೈ ಕೂಡ ಕಾರ್ಕಳ ಮೂಲದವರು...................

ಪಂಚಮ ಇಂಚರ ಕಾರ್ಯಕ್ರಮಕ್ಕೆ ಝಾಕಿರ್ ಹುಸೇನ್ ಅವರ ವಯೋಲಿನ್ ವಾದಕರು ಬಂದಿರಲಿಲ್ಲ. ಆದರೆ ಝಾಕಿರ್‌ ಹುಸೇನ್ ಅವರೇ ನನಗೆ ವಯೋಲಿನ್ ನುಡಿಸಲು ಬರಲು ತಿಳಿಸಿದ್ದರು. ಅದು ನನಗೆ ತುಂಬಾ ಖುಷಿ ತಂದಿತ್ತು. ಕಾರ್ಯಕ್ರಮ ಯಶಸ್ವಿಯಾಗಿತ್ತು. ಸಭಾಂಗಣದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು.

। ಟಿ.ಜಿ. ಗೋಪಾಲಕೃಷ್ಣ, ವಯೋಲಿನ್ ವಾದಕ, ಮಂಗಳೂರು ಅಕಾಶವಾಣಿಯ ನಿವೃತ್ತ ನಿಲಯ ಕಲಾವಿದರು.---------------

1997ರಲ್ಲಿ ನಡೆಸಿದ ಮೂರು ದಿನಗಳ ರಾಷ್ಟ್ರೀಯ ಯುವ ಸಂಗೀತ ಉತ್ಸವವು ದೇಶಾದ್ಯಂತದ ಕಲಾವಿದರನ್ನು ಒಳಗೊಂಡಿತ್ತು. ಕಾರ್ಕಳದಲ್ಲಿ ಪ್ರದರ್ಶನ ನೀಡಿದ ಎಲ್ಲ ಕಲಾವಿದರು ವಿಶ್ವ ಪ್ರಸಿದ್ಧರಾಗಿ ಗುರುತಿಸಿಕೊಂಡಿದ್ದಾರೆ. ಝಕಿರ್‌ ಹುಸೇನ್‌ ಅವರು ಜಿಎಸ್‌ಬಿ ಶೈಲಿಯ ಅಡುಗೆ ಸವಿದಿದ್ದರು.

। ನಿತ್ಯಾನಂದ ಪೈ ಕಾರ್ಕಳ, ಸಂಗೀತ ಸಭಾದ ಅಧ್ಯಕ್ಷರು