ಪ್ಯಾರಾ ಮೆಡಿಕಲ್ ಓದಿದ್ದ ನಗರದ ನಿವಾಸಿ ಸಾಬೀರ ಮುಲ್ಲಾ (20) ಎಂಬಾತ ಜಾಕೀಯಾಳನ್ನು ಮಂಗಳವಾರ ಸಂಜೆ ದುಪಟ್ಟಾದಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಆನಂತರ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದನು.
ಧಾರವಾಡ:
ಕರ್ನಾಟಕ ವಿಶ್ವವಿದ್ಯಾಲಯದ ಹಿಂಬದಿ ನಿರ್ಜನ ಪ್ರದೇಶದಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟಿದ್ದ 19 ವರ್ಷದ ಜಾಕೀಯಾ ಮುಲ್ಲಾಳನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿರುವುದು ತನಿಖೆಯಿಂದ ಇದೀಗ ದೃಢಪಟ್ಟಿದೆ.ಆಕೆಯ ಜತೆಗೆ ಪ್ಯಾರಾ ಮೆಡಿಕಲ್ ಓದಿದ್ದ ನಗರದ ನಿವಾಸಿ ಸಾಬೀರ ಮುಲ್ಲಾ (20) ಎಂಬಾತ ಜಾಕೀಯಾಳನ್ನು ಮಂಗಳವಾರ ಸಂಜೆ ದುಪಟ್ಟಾದಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಆನಂತರ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದನು. ಬುಧವಾರ ಬೆಳಗ್ಗೆ ಜಾಕೀಯಾಳದ ಮೃತದೇಹ ಪತ್ತೆಯಾಗಿ ಆತಂಕ ಸೃಷ್ಟಿಯಾಗಿತ್ತು. ಈ ಕುರಿತು ಕಾರ್ಯಪ್ರವೃತ್ತರಾದ ಪೊಲೀಸರು ಬುಧವಾರ ರಾತ್ರಿಯೊಳಗೆ ಕೊಲೆ ಆರೋಪಿ, ಆಕೆಯ ಪ್ರಿಯಕರ ಸಾಬೀರ ಮುಲ್ಲಾನನ್ನು ಬಂಧಿಸಿ ಕ್ರಮ ತೆಗೆದುಕೊಂಡರು.
ಈ ಕುರಿತು ''''ಕನ್ನಡಪ್ರಭ''''ದೊಂದಿಗೆ ಮಾತನಾಡಿದ ಎಸ್ಪಿ ಗುಂಜನ ಆರ್ಯ, ಸುಮಾರು ಎರಡ್ಮೂರು ವರ್ಷಗಳಿಂದ ಜಾಕೀಯಾಗೆ ಆರೋಪಿ ಸಾಬೀರ ಪರಿಚಯನಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮಾಡುವ ಕುರಿತು ಇಬ್ಬರು ಮನೆಗಳಲ್ಲಿ ಚರ್ಚೆಯೂ ಆಗಿತ್ತು. ಆದರೆ, ನಂತರದಲ್ಲಿ ಇಬ್ಬರ ಮಧ್ಯೆ ವೈಮನಸ್ಸು ಬಂದಿದ್ದು, ಮಂಗಳವಾರ ರಾತ್ರಿ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ಕುತ್ತಿಗೆಗೆ ದುಪಟ್ಟಾದಿಂದ ಬಿಗಿದು ಸಾಬೀರ ಕೊಲೆ ಮಾಡಿ ಮೃತದೇಹ ಎಸೆದು ಹೋಗಿದ್ದನು. ಇದೀಗ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದರು.ಗುರುವಾರ ಬೆಳಗ್ಗೆ ಜಾಕೀಯಾ ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಒಪ್ಪಿಸಲಾಗಿದ್ದು, ಈ ಸಂದರ್ಭದಲ್ಲಿ ಆರೋಪಿ ಸಾಬೀರನಿಗೆ ಗಲ್ಲುಶಿಕ್ಷೆ ಒದಗಿಸುವ ಮೂಲಕ ಜಾಕೀಯಾ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಕೆಯ ಸಂಬಂಧಿಕರು ಹಾಗೂ ಸಾರ್ವಜನಿಕರು ಆಗ್ರಹಿಸಿದರು.