ಕೇಂದ್ರ ಬಜೆಟ್‌ನಲ್ಲಿ ಕಲಬುರಗಿಗೆ ಶೂನ್ಯ ಕೊಡುಗೆ

| Published : Feb 02 2024, 01:00 AM IST / Updated: Feb 02 2024, 01:01 AM IST

ಸಾರಾಂಶ

ಕೇಂದ್ರ ಮಂಡಿಸಿರುವ ಬಜೆಟ್‌ ಮ್ಯಾಜಿಕ್‌ ಷೋ ನಂತಿದೆ. ಜಾದೂಗಾರರ ಮಾತಿನಂತೆ ಕಂಗೊಳಿಸಿದೆ. ಕೇಂದ್ರ ಇಲ್ಲಿ ಬಿಚ್ಚಿ ಹೇಳದೆ ಅನೇಕ ಸಂಗತಿ ಮುಚ್ಚಿಟ್ಟಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೇಂದ್ರ ಮಂಡಿಸಿರುವ ಬಜೆಟ್‌ ಮ್ಯಾಜಿಕ್‌ ಷೋ ನಂತಿದೆ. ಜಾದೂಗಾರರ ಮಾತಿನಂತೆ ಕಂಗೊಳಿಸಿದೆ. ಕೇಂದ್ರ ಇಲ್ಲಿ ಬಿಚ್ಚಿ ಹೇಳದೆ ಅನೇಕ ಸಂಗತಿ ಮುಚ್ಚಿಟ್ಟಿದೆ. ಕೇವಲ ಕಣ್ಕಟ್ಟಿನ ಆಯವ್ಯಯ ಪತ್ರವಾಗಿದ್ದು ಅಂಕಿ ಸಂಖ್ಯೆಗಳನ್ನು ಮಾತ್ರ ಹೇಳುತ್ತ ಜನರನ್ನು ಮರಳು ಮಾಡುತ್ತಿದ್ದಾರೆಂದು ಶಾಸಕರಾದ ಅಲ್ಲಂಪ್ರಭು ಪಾಟೀಲ್‌ ಕೇಂದ್ರ ಬಜೆಟ್‌ಗೆ ಟೀಕಿಸಿದ್ದಾರೆ.

ರೂಫ್‌ ಟಾಪ್‌ ಸೋಲಾರ್‌ ಯೋಜನೆ ಜನಪ್ರೀಯಗೊಳಿಸುವಲ್ಲಿ ಕೇಂದ್ರ ರಾಜ್ಯದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಮಾದರಿಯಲ್ಲಿಯೇ ಸೂರಿನ ಮೇಲೆ ಸೋಲಾರ್‌ ಮಾಡಿದವರಿಗೆ, 300 ಯೂನಿಟ್‌ ಉಚಿತ ನೀಡಲು ಹೊರಟಿದೆ. ಇದು ಒಂದು ರೀತಿಯಲ್ಲಿ ಕರುನಾಡಿನ ಯೋಜನೆಯ ನಕಲು ಮಾಡಿದಂತಿದೆ.

ಇನ್ನು ಡಾ. ಮಲ್ಲಿಕಾರ್ಜುನ ಖರ್ಗೆಯವರ ಕಸಿನ ಕೂಸಾಗಿರುವ ರೇಲ್ವೆ ವಿಭಾಗೀಯ ಕಚೇರಿಗೆ ಬಜೆಟ್‌ನಲ್ಲಿ ಹಣ ನೀಡದೆ ಇರೋದು ನಿಜಕ್ಕೂ ನಮಗೆಲ್ಲರಿಗೂ ನಿರಾಶೆ ಉಂಟು ಮಾಡಿದೆ ಂದು ಶಾಸಕರಾದ ಅಲ್ಲಂಪ್ರಭು ಪಾಟೀಲ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರವು ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರವು 25 ಕೋಟಿ ಮಂದಿಯನ್ನು ಬಡತನದ ತೆಕ್ಕೆಯಿಂದ ಹೊರತಂದಿರುವುದಾಗಿ ಹೇಳುತ್ತಿದೆ. ವಾಸ್ತವದಲ್ಲಿ ಜನತೆಯನ್ನು ಬಡತನದಿಂದ ಹೊರತರುವ ಯಾವುದೇ ನಿರ್ದಿಷ್ಟ ಯಜನೆಗಳನ್ನು ಹೇಳಿಲ್ಲ, ಅಂಕಿ ಸಂಖ್ಯೆ ನೀಡಿಲ್ಲವೆಂದು ಶಾಸಕರು ದೂರಿದ್ದಾರೆ.

ದೇಶದ ಮಹಿಳೆಯರು, ರೈತರು ಹಾಗೂ ಯುವಜನತೆಯ ಭವಿಷ್ಯದ ಮೇಲೆ ನೇರವಾಗಿ ಸಕಾರಾತ್ಮಕ ಪರಿಣಾಮ ಬೀರುವ ಯಾವುದೇ ಗುಣಾತ್ಮಕ ಸಂಗತಿಗಳನ್ನು ಈ ಬಜೆಟ್‌ ಹೊಂದಿಲ್ಲವೆಂದು ಅಲ್ಲಂಪ್ರಭು ಪಾಟೀಲರು ಟೀಕಿಸಿದ್ದಾರೆ.