ಹತ್ತು ವರ್ಷಗಳ ನಂತರ 2 ಶಾಲೆಗೆ ಸೊನ್ನೆ ಫಲಿತಾಂಶ

| Published : May 13 2024, 12:01 AM IST

ಹತ್ತು ವರ್ಷಗಳ ನಂತರ 2 ಶಾಲೆಗೆ ಸೊನ್ನೆ ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಎರಡು ಶಾಲೆಗಳಲ್ಲಿ ಒಂದೇ ಒಂದು ವಿದ್ಯಾರ್ಥಿಯೂ ತೇರ್ಗಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಶಾಲೆಗಳ ವಿಷಯವಾರು ಫಲಿತಾಂಶ ಮಾಹಿತಿ ಸಂಗ್ರಹಿಸುತ್ತಿದೆ.

ಸೋಮರಡ್ಡಿ ಅಳವಂಡಿ ಕೊಪ್ಪಳ: ಶಾಲೆಗಳ ಸೊನ್ನೆ ಫಲಿತಾಂಶ ಎನ್ನುವುದು ಇತ್ತೀಚೆಗೆ ಜಿಲ್ಲೆಯಲ್ಲಿ ಎಲ್ಲಿಯೂ ದಾಖಲಾಗಿರಲಿಲ್ಲ. ಬಹುತೇಕ ಶಾಲೆಗಳು ಶೇ. 100 ಫಲಿತಾಂಶವನ್ನೇ ನೀಡುತ್ತಿದ್ದವು. ಆದರೆ, ಪ್ರಸಕ್ತ ವರ್ಷ ಕಟ್ಟುನಿಟ್ಟಿನ ಪರೀಕ್ಷೆ ನಡೆಸಿದ್ದರಿಂದ ಫಲಿತಾಂಶ ಪಾತಾಳಕ್ಕೆ ಕುಸಿದಿವೆ. ಹತ್ತು ವರ್ಷಗಳ ಬಳಿಕ ಜಿಲ್ಲೆಯ ಎರಡು ಶಾಲೆಗಳಿಗೆ ಸೊನ್ನೆ ಫಲಿತಾಂಶ ಬಂದಿದೆ.

ಹೌದು, ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಎರಡು ಶಾಲೆಗಳಲ್ಲಿ ಒಂದೇ ಒಂದು ವಿದ್ಯಾರ್ಥಿಯೂ ತೇರ್ಗಡೆಯಾಗಿಲ್ಲ. ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳೂ ಡುಮ್ಕಿ ಹೊಡೆದಿದ್ದಾರೆ. ಹೀಗಾಗಿ, ಆ ಶಾಲೆಯ ಫಲಿತಾಂಶ ಈ ಬಾರಿ ಸೊನ್ನೆ ಎಂದು ಘೋಷಣೆ ಮಾಡಲಾಗಿದೆ.

ಯಾವ್ಯಾವ ಶಾಲೆಗಳು?: ಕುಷ್ಟಗಿ ತಾಲೂಕಿನ ತುಮರಗುದ್ದಿ ಸರ್ಕಾರಿ ಪ್ರೌಢಶಾಲೆಗೆ ಸೊನ್ನೆ ಫಲಿತಾಂಶ ಬಂದಿದೆ. ಆದರೆ, ಇದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ. ಈ ವರ್ಷವಷ್ಟೇ ಇಲ್ಲಿ ಪ್ರೌಢಶಾಲೆ ಪ್ರಾರಂಭವಾಗಿದೆ. ಅಲ್ಲಿ ಯಾರೊಬ್ಬರೂ ಶಿಕ್ಷಕರಿಲ್ಲ. ಹೀಗಾಗಿ, ಫಲಿತಾಂಶ ಸೊನ್ನೆಯಾಗಿದೆ. ತುಮರಗುದ್ದಿ ಹಿರಿಯ ಪ್ರಾಥಮಿಕ ಶಾಲೆಯನ್ನೇ ಮೇಲ್ದರ್ಜೆಗೇರಿಸಿ ಹೈಸ್ಕೂಲ್ ಪ್ರಾರಂಭಿಸಲಾಗಿದೆ. ಪ್ರಥಮ ವರ್ಷವಾಗಿದ್ದರಿಂದ ಇನ್ನು ಮೂಲಭೂತ ಸೌಕರ್ಯಗಳು ಇಲ್ಲಿ ಇಲ್ಲ. ಸರ್ಕಾರದಿಂದ ಪ್ರೌಢಶಾಲೆ ಆರಂಭಿಸುವ ಆದೇಶ ಬಂದಿತ್ತು. ಹೀಗಾಗಿ ಪ್ರೌಢಶಾಲೆ ತೆರೆದಿದ್ದೇವೆ. ಇಬ್ಬರು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಅಭ್ಯಾಸ ಮಾಡುತ್ತಿದ್ದರು. ಅವರಿಬ್ಬರೂ ಫೇಲಾಗಿದ್ದಾರೆ. ಹೀಗಾಗಿ, ಫಲಿತಾಂಶ ಸೊನ್ನೆಯಾಗಿದೆ ಎಂದು ವಿವರಣೆ ನೀಡುತ್ತಾರೆ.

ಆದರೆ, ಯಲಬುರ್ಗಾದಲ್ಲಿರುವ ಅನುದಾನ ರಹಿತ ಖಾಸಗಿ ಸರ್ಕಾರಿ ಪ್ರೌಢಶಾಲೆಯಲ್ಲಿ 15 ವಿದ್ಯಾರ್ಥಿಗಳು ಇದ್ದಾರೆ. ಅವರೆಲ್ಲರೂ ಅನುತ್ತೀರ್ಣರಾಗಿದ್ದಾರೆ. ಹೀಗಾಗಿ, ಇದು ಸಹ ಸೊನ್ನೆ ಫಲಿತಾಂಶ ಪಡೆದ ಶಾಲೆ ಎಂದು ದಾಖಲಾಗಿದೆ.

ಸೊನ್ನೆ ಫಲಿತಾಂಶ ಬಂದಿರುವ ಶಾಲೆಗಳ ಕುರಿತು ಪ್ರೌಢ ಶಿಕ್ಷಣ ಇಲಾಖೆ ವಿಶೇಷ ಮಾಹಿತಿ ಕಲೆ ಹಾಕುತ್ತಿದೆ. ಅದಕ್ಕೆ ನಿಖರ ಕಾರಣ ಪತ್ತೆ ಮಾಡುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಸೊನ್ನೆ ಫಲಿತಾಂಶಕ್ಕೆ ಕಾರಣದ ಮಾಹಿತಿ ನೀಡುವಂತೆ ಆಯಾ ಡಿಡಿಪಿಐಗಳನ್ನು ಕೇಳಿದೆ.

ವಿಷಯವಾರು ಫಲಿತಾಂಶದ ಪರಿಶೀಲನೆ: ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 32ನೇ ಸ್ಥಾನಕ್ಕೆ ಕುಸಿದಿದೆ. ಶೇ. 64 ವಿದ್ಯಾರ್ಥಿಗಳು ಮಾತ್ರ ಪಾಸ್ ಆಗಿದ್ದಾರೆ. ಇದಿಷ್ಟೇ ಅಲ್ಲದೆ, ಈಗ ವಿಷಯವಾರು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಯಾವ ವಿಷಯಗಳಲ್ಲಿ ಅತಿ ಕಡಿಮೆ ಫಲಿತಾಂಶ ಬಂದಿದೆ ಮತ್ತು ಯಾಕೆ ಎನ್ನುವ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ನಡೆದಿದೆ.

ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳಲ್ಲಿಯೇ ಅತಿ ಕಡಿಮೆ ಫಲಿತಾಂಶ ಬಂದಿರುವ ಮಾಹಿತಿ ಇದೆ. ಹೀಗಾಗಿ ಶಾಲೆಗಳ ಮಟ್ಟದಲ್ಲಿ ವಿಷಯವಾರು ಫಲಿತಾಂಶ ಪರಿಶೀಲನೆ ಮಾಡಲಾಗುತ್ತಿದೆ.ಹಲವು ವರ್ಷಗಳಿಂದ ಸೊನ್ನೆ ಫಲಿತಾಂಶ ಇರಲಿಲ್ಲ. ಆದರೆ, ಈ ವರ್ಷ 2 ಶಾಲೆಗಳಲ್ಲಿ ಸೊನ್ನೆ ಫಲಿತಾಂಶ ಬಂದಿದೆ. ತುಮರಗುದ್ದಿ ಸರ್ಕಾರಿ ಪ್ರೌಢಶಾಲೆ ಈ ವರ್ಷವಷ್ಟೇ ಪ್ರಾರಂಭವಾಗಿದೆ. ಅಲ್ಲಿ ಇಬ್ಬರು ವಿದ್ಯಾರ್ಥಿಗಳು ಮಾತ್ರ ಇದ್ದರು. ಹೀಗಾಗಿ, ಇಲ್ಲಿ ಸೊನ್ನೆ ಫಲಿತಾಂಶ ಬಂದಿದೆ. ಅನುದಾನ ರಹಿತ ಶಾಲೆಯೊಂದಕ್ಕೆ ಸೊನ್ನೆ ಫಲಿತಾಂಶ ಬಂದಿದ್ದು, ಕಾರಣಗಳನ್ನು ತಿಳಿಯಲಾಗುತ್ತಿದೆ ಎಂದು ಕೊಪ್ಪಳ ಡಿಡಿಪಿಐ ಶ್ರೀಶೈಲ ಬಿರಾದರ ಹೇಳುತ್ತಾರೆ.