ಸುದೀರ್ಘ ವರ್ಷಗಳ ನಂತರ ಜಿಪಂ, ತಾಪಂ ಚುನಾವಣೆಗೆ ಮೀಸಲಾತಿ ಪ್ರಕಟವಾಗಿ ಕಾರ್ಯಕರ್ತರನ್ನು ಬಡಿದೆಬ್ಬಿಸಿದೆ, ಚುನಾವಣೆ ರಂಗೇರುವುದಂತು ಸತ್ಯ.

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ದಶಕಗಳ ನಂತರ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿಗಳ ಚುನಾವಣೆಗೆ ಮೀಸಲಾತಿಯನ್ನು ಸರ್ಕಾರ ಪ್ರಕಟಿಸಿ ಅಧಿಸೂಚನೆ ಹೊರಡಿಸಿದ್ದು, ತಾಲೂಕಿನಲ್ಲಿ ರಾಜಕೀಯ ಗರಿಗೆದರಿದ್ದು, ಅಭ್ಯರ್ಥಿಗಳಾಗಲು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಸಿದ್ದತೆ ನಡೆಸಿದ್ದಾರೆ.

ಹರಪನಹಳ್ಳಿ ತಾಲೂಕಿನಲ್ಲಿ 22 ತಾಲೂಕು ಪಂಚಾಯ್ತಿ ಕ್ಷೇತ್ರಗಳು, ಹಾಗೂ 8 ಜಿ.ಪಂ ಕ್ಷೇತ್ರಗಳಿದ್ದು, ಮೀಸಲಾತಿ ಈ ಕೆಳಗಿನಂತಿದೆ.

ಜಿಪಂ ಕ್ಷೇತ್ರಗಳ ಮೀಸಲಾತಿ ವಿವರ: ಚಿಗಟೇರಿ ಕ್ಷೇತ್ರ - ಹಿಂದುಳಿದ ವರ್ಗ ಅ, ಅರಸೀಕೆರೆ - ಎಸ್ಟಿ(ಮಹಿಳೆ) , ಉಚ್ಚಂಗಿದುರ್ಗ - ಸಾಮಾನ್ಯ, ಕಂಚಿಕೇರಿ - ಎಸ್ಸಿ (ಮಹಿಳೆ) ತೆಲಿಗಿ - (ಸಾಮಾನ್ಯ), ನೀಲಗುಂದ -ಎಸ್ಸಿ, ಬಾಗಳಿ -ಸಾಮಾನ್ಯ(ಮಹಿಳೆ), ಹಲುವಾಗಲು ಸಾಮಾನ್ಯ(ಮಹಿಳೆ) ಹೀಗೆ ಜಿ.ಪಂ ಕ್ಷೇತ್ರಗಳ ಮೀಸಲಾತಿ ನಿಗದಿಯಾಗಿದೆ.

ತಾಪಂ ಕ್ಷೇತ್ರಗಳ ಮೀಸಲಾತಿ ವಿವರ: ತಮ್ಮ ತಮ್ಮ ಕ್ಷೇತ್ರದಲ್ಲಿ ಮೀಸಲಾತಿ ಪ್ರಕಟಗೊಂಡ ತಕ್ಷಣವೇ ಈ ಮೀಸಲಾತಿಯಲ್ಲಿ ನಾನು ಸ್ಪರ್ಧೆ ಮಾಡಲೇಬೇಕು ಎನ್ನುವ ಅಭ್ಯರ್ಥಿಗಳು ತಮ್ಮ ರಾಜಕೀಯ ಮುಖಂಡರನ್ನು ಭೇಟಿ ಮಾಡಿ ಪಕ್ಷದ ಟಿಕೆಟ್‌ ಗಿಟಿಸಿಕೊಳ್ಳಲು ಲಾಬಿ ಶುರುವಾಗಿದೆ.

ಚಿಗಟೇರಿ -ಸಾಮಾನ್ಯ(ಮಹಿಳೆ), ಸಾಸ್ವಿಹಳ್ಳಿ- ಸಾಮಾನ್ಯ(ಮಹಿಳೆ), ಮತ್ತಿಹಳ್ಳಿ - ಸಾಮಾನ್ಯ (ಮಹಿಳೆ), ಅರಸೀಕೆರೆ - ಎಸ್ಟಿ, ನಿಚ್ಚವನಹಳ್ಳಿ- ಎಸ್ಟಿ(ಮಹಿಳೆ), ಅಣಜಿಗೇರಿ - ಎಸ್ಸಿ(ಮಹಿಳೆ), ಉಚ್ಚಂಗಿದುರ್ಗ - ಎಸ್ಟಿ, ಪುಣಭಗಟ್ಟ -ಸಾಮಾನ್ಯ, ಕಂಚಿಕೇರಿ -ಸಾಮಾನ್ಯ, ತೌಡೂರು -ಎಸ್ಸಿ, ಹಿರೇಮೇಗಳಗೇರಿ -ಸಾಮಾನ್ಯ, ತೆಲಿಗಿ -ಎಸ್ಟಿ (ಮಹಿಳೆ), ದುಗ್ಗಾವತ್ತಿ -ಸಾಮಾನ್ಯ, ರಾಗಿಮಸಲವಾಡ- ಎಸ್ಸಿ,ನೀಲಗುಂದ -ಸಾಮಾನ್ಯ(ಮಹಿಳೆ), ತೊಗರಿಕಟ್ಟೆ -ಎಸ್ಸಿ(ಮಹಿಳೆ), ಹಾರಕನಾಳು -ಎಸ್ಸಿ, ಬಾಗಳಿ -ಸಾಮಾನ್ಯ, ನಂದಿಬೇವೂರು -ಎಸ್ಸಿ(ಮಹಿಳೆ), ಹಲುವಾಗಲು - ಹಿಂದುಳಿದ ವರ್ಗ (ಅ ಮಹಿಳೆ) ಕುಂಚೂರು -ಸಾಮಾನ್ಯ, ನಿಟ್ಟೂರು -ಸಾಮಾನ್ಯ(ಮಹಿಳೆ) ಹೀಗೆ ತಾ.ಪಂ ಯ 22 ಕ್ಷೇತ್ರಗಳಿಗೆ ಮೀಸಲಾತಿ ನಿಗದಿ ಪಡಿಸಲಾಗಿದೆ.

ಜಿ.ಪಂ ಹಾಗೂ ತಾ.ಪಂ ಕ್ಷೇತ್ರಗಳಿಗೆ ಮೀಸಲಾತಿ ಶುಕ್ರವಾರ ಸಂಜೆ ಪ್ರಕಟವಾಗುತ್ತಿದ್ದಂತೆಯೇ ಬಹಳ ದಿನಗಳಿಂದ ಕಾಯುತ್ತಲಿದ್ದ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮಿಂಚಿನಂತೆ ತಮ್ಮ ತಮ್ಮ ಪಕ್ಷದ ಅಧ್ಯಕ್ಷರುಗಳಿಗೆ, ಮುಖಂಡರುಗಳಿಗೆ, ಶಾಸಕರಿಗೆ, ಮಾಜಿ ಶಾಸಕರುಗಳಿಗೆ ಹಾಗೂ ತಮಗೆ ಆಪ್ತರಿಗೆ ದೂರವಾಣಿ ಮಾಡಿ ಟಿಕೆಟ್‌ ಕೊಡಿ, ಕೊಡಿಸಿ ಎಂದು ಕೇಳರಾಂಭಿಸಿದರು.

ಗ್ರಾಮೀಣ ಭಾಗದಲ್ಲಿ ಈ ಕ್ಷೇತ್ರ ಈ ಮೀಸಲಾತಿ ಇದೆ, ಇವರು ಆಕಾಂಕ್ಷಿಗಳಿದ್ದಾರೆ, ಇವರಿಗೆ ಕೊಡಬಹುದು, ಇಲ್ಲ ಅವರಿಗೆ ಕೊಡಬಹುದು ಎಂಬ ಲೆಕ್ಕಾಚಾರ ನಡೆಸಿದ್ದಾರೆ.

ಕೆಲವೊಬ್ಬರು ತಮ್ಮ ನಿರೀಕ್ಷೆಯಂತೆ ಮೀಸಲಾತಿ ಬಂದಿಲ್ಲ ಎಂದು ಅಸಮಾದಾನ ಹೊಂದಿದ್ದು, ಕಾಂಗ್ರೆಸ್‌ ಪಕ್ಷದಲ್ಲಿ ಶಾಸಕರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಬ್ಲಾಕ್‌ ಕಾಂಗ್ರೆಸ್ ನವರು ಹೇಳುತಿದ್ದರೆ , ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಚುನಾವಣೆ ಮಾಡಿದವರು ಎಲ್ಲರೂ ಸೇರಿ ಒಗ್ಗೂಡಿ ಚುನಾವಣೆ ಎದುರಿಸುವರೆ ಎಂಬ ಪ್ರಶ್ನೆ ಹಲವರದ್ದಾಗಿದೆ, ಇನ್ನೂ ಬಿಜೆಪಿ ಸ್ಥಿತಿ ಸಹ ಇದಕ್ಕಿಂತ ಭಿನ್ನವೇನು ಇಲ್ಲ, ಬಿಜೆಪಿ ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಮಾಜಿ ಶಾಸಕ ಕರುಣಾಕರರೆಡ್ಡಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳುತ್ತಾರೆ, ಆದರೆ ಇಲ್ಲೂ ಸಹ ನಂಜನಗೌಡ ಬಣದವರ ನಡೆ ಏನು ಎಂಬುದು ಇನ್ನೂ ಗೊತಿಲ್ಲ. ಜೆಡಿಎಸ್‌ ಇಲ್ಲಿ ಅಷ್ಟೊಂದು ಪ್ರಬಲ ವಿಲ್ಲದಿದ್ದರೂ ಅವರ ನಡೆ ಮೈತ್ರಿಯೋ ಏನೊ ಗೊತ್ತಿಲ್ಲ, ಚುನಾವಣಾ ದಿನಾಂಕ ಪ್ರಕಟವಾದ ನಂತರ ತಿಳಿಯಬಹುದು.

ಒಟ್ಟಿನಲ್ಲಿ ಸುದೀರ್ಘ ವರ್ಷಗಳ ನಂತರ ಜಿಪಂ.ತಾ.ಪಂ ಚುನಾವಣೆಗೆ ಮೀಸಲಾತಿ ಪ್ರಕಟವಾಗಿ ಕಾರ್ಯಕರ್ತರನ್ನು ಬಡಿದೆಬ್ಬಿಸಿದೆ, ಚುನಾವಣೆ ರಂಗೇರುವುದಂತು ಸತ್ಯ.

ಗ್ಯಾರಂಟಿ ಯೋಜನೆ: ಜಿಪಂ, ತಾಪಂ ಚುನಾವಣೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದೇವೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಶಾಸಕರ ನೇತೃತ್ವದಲ್ಲಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಿ ನಮ್ಮ ಅಭಿವೃದ್ಧಿ ಹಾಗೂ ಗ್ಯಾರಂಟಿ ಯೋಜನೆಗಳ ಮೇಲೆ ಚುನಾವಣೆ ಎದುರಿಸಿ ಯಶಸ್ವಿಯಾಗುತ್ತೇವೆ ಎಂದು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ ತಿಳಿಸಿದರು.

ಚುನಾವಣೆಗೆ ಸಿದ್ಧತೆ: ಜಿಪಂ, ತಾಪಂ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ,ಮಾಜಿ ಶಾಸಕ ಜಿ. ಕರುಣಾಕರರೆಡ್ಡಿ ನೇತೃತ್ವದಲ್ಲಿ ಅವರು ಈ ಹಿಂದೆ ಶಾಸಕರಾಗಿದ್ದಾಗ ಕೈಗೊಂಡ ಅಭಿವೃದ್ದಿ ಕಾರ್ಯಗಳು ಹಾಗೂ ಮೋದೀಜಿ ಅವರ ಆಡಳಿತದ ಮೇಲೆ ಚುನಾವಣೆ ಎದುರಿಸಿ ಯಶಸ್ವಿಯಾಗುತ್ತೇವೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ ತಿಳಿಸಿದರು.