Zilla Panchayat and Taluk Panchayat elections by January: Khandre
ಶಿವಮೊಗ್ಗ: ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯತ್ ಚುನಾವಣೆ ನಡೆಸಬೇಕು ಅಂತ ಸಚಿವ ಸಂಪುಟದಲ್ಲಿ ತಿರ್ಮಾನ ಮಾಡಿದ್ದೇವೆ. ಡಿಸೆಂಬರ್ 2ನೇ ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟ ಆಗಿ, ಜನವರಿ ಮೊದಲ ವಾರ ಅಥವಾ 2ನೇ ವಾರದಲ್ಲಿ ತಾಲೂಕು- ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಪಂ. ಮತ್ತು ತಾಪಂ ಚುನಾವಣೆಯ ಮೀಸಲಾತಿಯ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಅ.19ರವರೆಗೆ ಅವಕಾಶವಿತ್ತು. 1800 ಆಕ್ಷೇಪಣೆ ಅರ್ಜಿಗಳು ಬಂದಿದೆ ಎನ್ನುವ ಮಾಹಿತಿ ಇದೆ. ಒಂದು ವಾರದೊಳಗೆ ಆಕ್ಷೇಪಣೆಗಳನ್ನು ಪರಿಶೀಲನೆ ಮಾಡಿ ಅಂತಿಮವಾಗಿ ಕ್ಷೇತ್ರಗಳ ಪಟ್ಟಿ ಪ್ರಕಟಿಸುತ್ತೇವೆ ಎಂದರು. ಈ ತಿಂಗಳೊಳಗೆ ಮೀಸಲಾತಿ ಪಟ್ಟಿ ಅಂತಿಮಗೊಳಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸುತ್ತೇವೆ. ಚುನಾವಣಾ ಆಯೋಗ, ಚುನಾವಣೆ ದಿನಾಂಕ, ವೇಳಾಪಟ್ಟಿ ಘೋಷಣೆ ಮಾಡಲಿದೆ. ಬ್ಯಾಲೆಟ್ ಬಾಕ್ಸ್ ಸೇರಿದಂತೆ ಎಲ್ಲಾ ತಯಾರಿ ಮಾಡಲು ಚುನಾವಣಾ ಆಯೋಗಕ್ಕೆ ಸಮಯಬೇಕು ಎಂದು ತಿಳಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಸ್ಟಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಈಗಾಗಲೇ ತನಿಖೆ ನಡೆಯುತ್ತಿದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆಯಲ್ಲಿ ಎಲ್ಲ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಪಾರದರ್ಶಕವಾಗಿ ತನಿಖೆ ನಡೆಯಲಿದ್ದು, ತನಿಖೆ ವರದಿ ಆಧಾರದ ಮೇಲೆ ಕಠಿಣವಾದ ಕ್ರಮ ಸಹ ಆಗಲಿದೆ ಎಂದರು.
ದಸರಾ ಆನೆಗಳಿಗೆ ಹೆಚ್ಚು ತಾಲೀಮು:ದಸರಾ ಮಹೋತ್ಸವ ಸೇರಿದಂತೆ ಯಾವುದೇ ಉತ್ಸವದಲ್ಲಿ ಭಾಗಿಯಾಗುವ ಸಾಕಾನೆಗಳಿಗೆ ಹೆಚ್ಚಿನ ತಾಲೀಮು ನೀಡುವುದು ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದು ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟರು.ಸೋಮಣ್ಣ ಆನೆ ವಿಜಯದಶಮಿಯ ದಿನ ಅಡ್ಡಾದಿಡ್ಡಿಯಾಗಿ ಓಡಿದ ಪರಿಣಾಮ ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ. ಅರಣ್ಯ ಸಚಿವರಾದ ರಾಮಲಿಂಗಾರೆಡ್ಡಿ ಅವರು ಈಗಾಗಲೇ ಹೆಚ್ಚಿನ ತಾಲೀಮು ನಡೆಸುವಂತೆ ಆದೇಶ ನೀಡಿದ್ದಾರೆ. ಯಾವುದೇ ಉತ್ಸವಗಳಲ್ಲಿ ಸಾಕಾನೆಗಳನ್ನು ಬಳಕೆ ಮಾಡುವಾಗ ಹೆಚ್ಚಿನ ತಾಲೀಮು ನಡೆಸಬೇಕಾಗುತ್ತದೆ, ಜೊತೆಗೆ ಇನ್ನೂ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು, ಸರ್ಕಾರ ಈ ಕಾರ್ಯ ಮಾಡಲಿದೆ ಎಂದರು.
