ಜಿಪಂ ಸಿಇಓ ಗಿಟ್ಟೆ ಮಾಧವ ವಿಠ್ಠಲರಾವ್ ಅವರು ಕಮಲನಗರ ತಾಲೂಕಿನ ಚಿಮ್ಮೆಗಾಂವ ಗ್ರಾಪಂ ವ್ಯಾಪ್ತಿಯ ಚಿಮ್ಮೆಗಾಂವ, ಹಂದಿಕೇರಾ ಹಾಗೂ ಮಾಳೇಗಾಂವ ಗ್ರಾಮಗಳಿಗೆ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಸೌಲಭ್ಯಗಳನ್ನು ಪರಿಶೀಲಿಸಿ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ತ್ವರಿತವಾಗಿ ಪರಿಹಾರ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕನ್ನಡಪ್ರಭ ವಾರ್ತೆ ಕಮಲನಗರ
ಜಿಪಂ ಸಿಇಓ ಗಿಟ್ಟೆ ಮಾಧವ ವಿಠ್ಠಲರಾವ್ ಅವರು ಕಮಲನಗರ ತಾಲೂಕಿನ ಚಿಮ್ಮೆಗಾಂವ ಗ್ರಾಪಂ ವ್ಯಾಪ್ತಿಯ ಚಿಮ್ಮೆಗಾಂವ, ಹಂದಿಕೇರಾ ಹಾಗೂ ಮಾಳೇಗಾಂವ ಗ್ರಾಮಗಳಿಗೆ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಸೌಲಭ್ಯಗಳನ್ನು ಪರಿಶೀಲಿಸಿ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ತ್ವರಿತವಾಗಿ ಪರಿಹಾರ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ರಸ್ತೆ ಕಾಮಗಾರಿ ಪರಿಶೀಲನೆ: ಚಿಮ್ಮೆಗಾಂವ ಗ್ರಾಮದಿಂದ ಹಂದಿಕೇರಾ ಗ್ರಾಮದವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದ ಸಿಇಒ ಅವರು, ಕಾಮಗಾರಿಯಲ್ಲಿ ಗುಣಮಟ್ಟದ ಸಾಮಗ್ರಿಗಳನ್ನು ಬಳಸಬೇಕು ಹಾಗೂ ನಿಗದಿತ ಮಾನದಂಡಗಳಂತೆ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ: ಹಂದಿಕೇರಾ ಗ್ರಾಮದಲ್ಲಿ ಈಗಾಗಲೇ ಇರುವ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ನೀರೆತ್ತುವ ಯಂತ್ರ ಅಳವಡಿಸುವ ಮೂಲಕ ಒಂದು ವಾರದೊಳಗೆ ನೀರು ಪೂರೈಕೆ ಆರಂಭಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಾರುತಿ ರಾಠೋಡ ಅವರಿಗೆ ಸೂಚಿಸಿದರು.ಮಾಳೇಗಾಂವ ಗ್ರಾಮದಲ್ಲಿರುವ ಎರಡು ಕೊಳವೆ ಬಾವಿಗಳಿಗೆ ನೀರೆತ್ತುವ ಯಂತ್ರ ಹಾಗೂ ವಿದ್ಯುತ್ ತಂತಿಗಳನ್ನು ಅಳವಡಿಸಿ, ಗ್ರಾಮಸ್ಥರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಚಿಮ್ಮೆಗಾಂವ ಗ್ರಾಮದಲ್ಲಿ ಬೋರ್ವೆಲ್ ಹಾಗೂ ಜಲ ಜೀವನ್ ಮಿಷನ್ ಅಡಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳನ್ನು ಪರಿಶೀಲಿಸಿ, ಕುಡಿಯುವ ನೀರಿನ ಸೌಲಭ್ಯಗಳು ಜನರಿಗೆ ಸಮರ್ಪಕವಾಗಿ ತಲುಪುವಂತೆ ಕ್ರಮ ವಹಿಸಲು ತಿಳಿಸಿದರು. ಅಲ್ಲದೆ, ಚಿಮ್ಮೆಗಾಂವ ಗ್ರಾಮ ವ್ಯಾಪ್ತಿಯಲ್ಲಿ ಹೊಸದಾಗಿ ಓವರ್ ಹೆಡ್ ವಾಟರ್ ಸ್ಟೋರೇಜ್ ಟ್ಯಾಂಕ್ ನಿರ್ಮಿಸಲು ಸೂಕ್ತ ಜಾಗ ಗುರುತಿಸಿ ನೀಡುವಂತೆ ಪಿಡಿಓಗಳಿಗೆ ಸೂಚಿಸಿದರು.ನಂತರ ಚಿಮ್ಮೆಗಾಂವ ಹಾಗೂ ಹಂದಿಕೇರಾ ಗ್ರಾಮಗಳಲ್ಲಿನ ಕುಡಿಯುವ ನೀರಿನ ಟ್ಯಾಂಕ್ಗಳನ್ನು ಪರಿಶೀಲಿಸಿ, ನೀರಿನ ಗುಣಮಟ್ಟದ ಕುರಿತು ಮಾಹಿತಿ ಪಡೆದರು. ಕುಡಿಯುವ ನೀರಿನ ಟ್ಯಾಂಕ್ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ, ಸಾರ್ವಜನಿಕರಿಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಸಬೇಕು ಎಂದು ಸೂಚಿಸಿದರು.
ಚಿಮ್ಮೆಗಾಂವ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಗ್ರಾಮಸ್ಥರು ಆಸ್ಪತ್ರೆಯ ಸಿಬ್ಬಂದಿಗಳು ಸರಿಯಾಗಿ ಆರೈಕೆ ಮಾಡುತ್ತಿಲ್ಲ ಹಾಗೂ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂದು ದೂರು ನೀಡಿದರು. ಇದಕ್ಕೆ ಸ್ಪಂದಿಸಿದ ಸಿಇಒ, ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು. ಆಸ್ಪತ್ರೆಗೆ ಬರುವ ಗ್ರಾಮಸ್ಥರಿಗೆ ಸಮರ್ಪಕ ಚಿಕಿತ್ಸೆ ನೀಡುವುದರೊಂದಿಗೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರದೆ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ತಾ.ಪಂ ಅಧಿಕಾರಿ ಹಣಮಂತರಾಯ ಕೌಟಗೆ, ಎಇಇ ಮಾರುತಿ ರಾಠೋಡ, ಪಿಡಿಓ ಜ್ಞಾನೇಶ್ವರ, ಟಿಸಿ ಅಮರ, ಟಿಎ ಅರ್ಜುನ, ವಿನೋದ, ವಿರೂಪಾಕ್ಷ, ಡಿಇಒ ಸಾಗರ, ಗ್ರಾಪಂ ಸಿಬ್ಬಂದಿ, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.