ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ 2027ರ ಜನವರಿಯಲ್ಲಿ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ ಮತ್ತು ಮೀಸಲಾತಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ, ಗುಂಡ್ಲುಪೇಟೆಯಲ್ಲಿ ನಡೆಸಲು ಉದ್ದೇಶಿಸಿದ್ದ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ 1067ನೇ ಜಯಂತಿ ಮಹೋತ್ಸವ ಮುಂದೂಡುವ ಸಾಧ್ಯತೆ ಹೆಚ್ಚಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ 2027ರ ಜನವರಿಯಲ್ಲಿ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ ಮತ್ತು ಮೀಸಲಾತಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ, ಗುಂಡ್ಲುಪೇಟೆಯಲ್ಲಿ ನಡೆಸಲು ಉದ್ದೇಶಿಸಿದ್ದ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ 1067ನೇ ಜಯಂತಿ ಮಹೋತ್ಸವ ಮುಂದೂಡುವ ಸಾಧ್ಯತೆ ಹೆಚ್ಚಿದೆ.ಮೈಸೂರಿನ ಸುತ್ತೂರು ಮಠದಲ್ಲಿ ಭಾನುವಾರ ಬೆಳಿಗ್ಗೆ ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಅವರ ನೇತೃತ್ವದಲ್ಲಿ ತುರ್ತು ಸಭೆ ನಡೆದಿದೆ. ಸಭೆಯಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಸೇರಿದಂತೆ ವಿವಿಧ ಸಮಾಜದ ಸುಮಾರು 50ಕ್ಕೂ ಹೆಚ್ಚು ಮುಖಂಡರು ಭಾಗವಹಿಸಿ,ಜಯಂತಿ ಆಚರಣೆ ಕುರಿತು ಚರ್ಚೆ ನಡೆಸಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಅಧಿಕೃತವಾಗಿ ಘೋಷಣೆಯಾಗಿಲ್ಲದಿದ್ದರೂ, 2027ರ ಜನವರಿಯಲ್ಲಿ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ. ಜತೆಗೆ ಕ್ಷೇತ್ರಗಳ ಮೀಸಲಾತಿಯೂ ಬಿಡುಗಡೆಯಾಗಿದೆ. ಒಂದು ವೇಳೆ ಜನವರಿಯಲ್ಲೇ ಚುನಾವಣೆ ನಡೆದರೆ, ಜಯಂತಿ ಮಹೋತ್ಸವ ನಡೆಸಲು ತೊಂದರೆಯಾಗಲಿದೆ ಎಂಬ ಮಾತು ಸಭೆಯಲ್ಲಿ ಕೇಳಿಬಂದಿದೆ.ಸುತ್ತೂರು ಶ್ರೀಗಳ ಸಲಹೆ
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಜನವರಿಯಲ್ಲಿ ದಿಡೀರ್ ಘೋಷಣೆಯಾದರೆ ಜಯಂತಿ ಆಚರಣೆಗೆ ಅನಾನುಕೂಲವಾಗುತ್ತದೆ. ಯಾವುದಕ್ಕೂ ಸ್ವಲ್ಪ ದಿನ ಕಾದು ನೋಡೋಣ. ಚುನಾವಣೆ ಮುಂದೂಡಿದರೆ ಜಯಂತಿ ಮಹೋತ್ಸವದ ಸಿದ್ಧತೆ ಮಾಡಿಕೊಳ್ಳೋಣ ಎಂದು ಸುತ್ತೂರು ಶ್ರೀಗಳು ಸಭೆಯಲ್ಲಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.ಕಚೇರಿ ಪೂಜೆ ಮುಂದೂಡಿಕೆ
ಗುಂಡ್ಲುಪೇಟೆಯಲ್ಲಿ 2027ರ ಜನವರಿಯಲ್ಲಿ ಜಯಂತಿ ಮಹೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಅ.12ರ ಸೋಮವಾರ ಕಚೇರಿ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಭಾನುವಾರ ಸುತ್ತೂರು ಮಠ ಸಭೆಯಲ್ಲಿ ಸುತ್ತೂರು ಶ್ರೀಗಳು ‘ಸೋಮವಾರದ ಕಚೇರಿ ಉದ್ಘಾಟನೆ ಮುಂದೂಡಿ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಘೋಷಣೆ ನೋಡಿಕೊಂಡು ಮುಂದುವರಿಯಿರಿ’ ಎಂದು ಸಲಹೆ ನೀಡಿದ್ದಾರೆ ಎಂದು ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕದ ಅಧ್ಯಕ್ಷ ಎಸ್.ಗುರುಪ್ರಸಾದ್ ತಿಳಿಸಿದ್ದಾರೆ.ಪೂರ್ವ ತಯಾರಿ ನಡೆದಿತ್ತು:
ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ೧೦೬೬ ರ ಜಯಂತಿ ಮಹೋತ್ಸವದ ಸಮಯದಲ್ಲಿ ಮುಂದಿನ ಜಯಂತಿ ಮಹೋತ್ಸವ ಮುಂದಿನ 2027 ರ ಜನವರಿಯಲ್ಲಿ ಗುಂಡ್ಲುಪೇಟೆಯಲ್ಲಿ ಜಯಂತಿ ನಡೆಸಲು ತೀರ್ಮಾನಿಸಲಾಗಿತ್ತು.ಇದಕ್ಕೆ ಹಾಲಿ, ಮಾಜಿ ಶಾಸಕರು ಹಾಗೂ ವೀರಶೈವ ಸೇರಿದಂತೆ ವಿವಿಧ ಸಮಾಜದ ಮುಖಂಡರು ಶ್ರೀಗಳಿಗೆ ಮಾತು ಕೊಟ್ಟಿದ್ದರು.ಪಟ್ಟಣದಲ್ಲಿ ಎರಡು ಪೂರ್ವಭಾವಿ ಸಭೆಗಳು ನಡೆದಿದ್ದು,ವೇದಿಕೆ ಸ್ಥಳ ಪರಿಶೀಲನೆ ಮತ್ತು ವಿವಿಧ ಸಮಿತಿಗಳ ನೇಮಕದ ಬಗ್ಗೆಯೂ ಚರ್ಚೆ ನಡೆದಿತ್ತು.
ಒಟ್ಟಾರೆ, ರಾಜ್ಯ ಸರ್ಕಾರದ ಚುನಾವಣೆ ಘೋಷಣೆಯ ಮೇಲೆ ಸುತ್ತೂರು ಶಿವರಾತ್ರೀಶ್ವರರ ಐತಿಹಾಸಿಕ ಜಯಂತಿ ಮಹೋತ್ಸವದ ಭವಿಷ್ಯ ನಿಂತಿದೆ. ಚುನಾವಣೆ ನಡೆದರೆ ಜಯಂತಿ ಮುಂದೂಡಿಕೆ,ಚುನಾವಣೆ ಮುಂದೂಡಿದರೆ ಜಯಂತಿ ಆಚರಣೆ ನಿಶ್ಚಿತ.