ಸಾರಾಂಶ
ಕುತ್ತಾರು ಒಲವಿನ ಊಟದ ಮಹಿಳಾ ಒಗ್ಗಟ್ಟಿಗೆ ಸರ್ಕಾರದ ಮನ್ನಣೆ । ಮಹಿಳಾ ಸ್ವಾವಲಂಬನೆ
ಕನ್ನಡಪ್ರಭ ವಾರ್ತೆ ಉಳ್ಳಾಲರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕರ್ನಾಟಕ ಆಶ್ರಯದಲ್ಲಿ ಸ್ನೇಹ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಮುನ್ನೂರು ಗ್ರಾಮ ಪಂಚಾಯಿತಿ ಸೇರಿಕೊಂಡು ಕುತ್ತಾರು ಜಂಕ್ಷನ್‌ನಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಕಳೆದ ಆರು ತಿಂಗಳ ಹಿಂದೆ ಸ್ಥಾಪಿಸಿದ ಅಕ್ಕ ಕೆಫೆ ಸರ್ಕಾರದ ಗಮನ ಸೆಳೆದಿದೆ.
ಮಹಿಳಾ ಮಣಿಗಳ ಒಗ್ಗಟ್ಟಿನ ಉದ್ಯಮ ಯಶಸ್ಸಿನತ್ತ ದಾಪುಗಾಲು ಇಡುತ್ತಿದ್ದು, ಗುಣಮಟ್ಟದ ಆಹಾರ, ಸ್ಥಾಪಕ ಮಹಿಳೆಯರ ಒಗ್ಗಟ್ಟು ಹಾಗೂ ಉತ್ತಮ ವ್ಯವಹಾರವನ್ನು ಪುರಸ್ಕರಿಸಿ ಶನಿವಾರ ಪೂರ್ವಾಹ್ನ ಮಂಗಳೂರು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ವಿಶೇಷ ಗೌರವ ಸಲ್ಲಿಕೆಯಾಗಲಿದೆ.ಮುನ್ನೂರು ಗ್ರಾಮ ಪಂಚಾಯಿತಿ ಸ್ನೇಹ ಸಂಜೀವಿನಿ ಒಕ್ಕೂಟದ ನಳಿನಾಕ್ಷಿ, ಕಮಲಾಕ್ಷಿ , ಕವಿತಾ, ತಾರಾವತಿ, ಭಾರತಿ, ಹೇಮಾ , ಸುಪ್ರೀತಾ ಎಂಬವರು ಸೇರಿಕೊಂಡು ‘ಅಕ್ಕ ಕೆಫೆ’ ಆರಂಭಿಸಿ ಸ್ವಾವಲಂಬನೆ ಬದುಕಿಗೆ ದಾರಿ ಮಾಡಿಕೊಂಡವರು.
ಸೋಮೇಶ್ವರಿ ಸ್ತ್ರೀಶಕ್ತಿ ಸಂಘ ಹಾಗೂ ಸಹನಾ ಸ್ತ್ತೀಶಕ್ತಿ ಸಂಘದ 9 ಮಂದಿಯ ಪೈಕಿ ಆರು ಮಂದಿ ಸೇರಿಕೊಂಡು ಯೋಜನೆ ರೂಪಿಸಿದರು.ಎರಡು ಸ್ತ್ರೀಶಕ್ತಿ ಸಂಘಗಳಿಂದ ರು.1.5 ಲಕ್ಷದಂತೆ ರು.3 ಲಕ್ಷ ಸಾಲ ಪಡೆದು ತಮ್ಮದೇ ಸಂಘದ ಕಮಲಾಕ್ಷಿ ಎಂಬವರಿಗೆ ಸೇರಿದ ಜಾಗ ಬಾಡಿಗೆಗೆ ಪಡೆದು , ಅವರು ಕಟ್ಟಿಕೊಟ್ಟ ಕಟ್ಟಡದಲ್ಲಿ ವ್ಯವಹಾರ ಆರಂಭಿಸಿದರು. ಆಹಾರದಲ್ಲಿ ಕೋಳಿ ಸುಕ್ಕ, ಪುಳಿಮುಂಚಿ, ಮೀನು ಫ್ರೈ ಉತ್ತಮ ರುಚಿಯೊಂದಿಗೆ ನೀಡಿದ ಫಲವಾಗಿ ಗ್ರಾಹಕರ ಸಂಖ್ಯೆಯೂ ಹೆಚ್ಚಾಯಿತು.
ಹೀಗೆ ಸೋಮೇಶ್ವರ ಪುರಸಭೆಯವರು ಕಾರ್ಯಕ್ರಮವೊಂದಕ್ಕೆ ಚಹಾ ತಿಂಡಿ ಆರ್ಡರ್ ನೀಡಿದ್ದು, ನಂತರ ದೆಕ್ಕಾಡು ಅಜ್ಜನ ಕೋಲಕ್ಕೆ 1000 ಮಂದಿಗೆ ಊಟದ ವ್ಯವಸ್ಥೆ, ಜೈ ವೀರಾಂಜನೇಯ ವ್ಯಾಯಾಮ ಶಾಲೆ ಹೀಗೆ ನಿರಂತರ ಆರ್ಡರ್ ಗಳು ಬರುತ್ತಾ ಇದ್ದು, ಉತ್ತಮ ವ್ಯವಹಾರ ಅಕ್ಕ ಕೆಫೇ ಆರಂಭಿಸಿದೆ.ಐದು ಮಂದಿಯಲ್ಲಿ ಕೆಲಸವನ್ನು ಹಂಚಿಕೊಂಡು, ಒಂದೇ ತಾಯಿಯ ಮಕ್ಕಳಂತೆ ಬಾಳುತ್ತಿದ್ದೇವೆ. ಹಿಂದೆ ಬೀಡಿ ಕಟ್ಟುವ ದಿನಗಳ ವಾತಾವರಣ ಸಂಪೂರ್ಣ ಬದಲಾವಣೆಯಾಗಿದೆ. ಎಲ್ಲರೂ ಸುಖ ದುಖವನ್ನು ಕೆಫೇ ಕೆಲಸದ ವೇಳೆ ಹಂಚುತ್ತೇವೆ. ಸದಸ್ಯರೊಳಗಿನ ಮನೆಗಳಲ್ಲಿರುವ ಕಾರ್ಯಕ್ರಮಗಳಿಗೂ ತೆರಳುತ್ತೇವೆ. ಇದರಿಂದ ನಮ್ಮೊಳಗಿನ ಬಾಂಧವ್ಯ ಗಟ್ಟಿಯಾಗಿದೆ ಎನ್ನುತ್ತಾರೆ ಬಳಗದ ನಳಿನಾಕ್ಷಿ.
ಇದೇ ಯಶಸ್ಸಿನ ಪಥದತ್ತ ಕೊಂಡೊಯ್ಯುವ ವಿಶ್ವಾಸವಿದೆ. ಸರ್ಕಾರದಿಂದ ಇನ್ನಷ್ಟು ಸಹಾಯಧನ ಸಿಕ್ಕಲ್ಲಿ ಪ್ರೋತ್ಸಾಹ ಸಿಕ್ಕಂತಾಗುವುದು. ಅಲ್ಲದೆ ಕೆಫೆಯನ್ನು ಇನ್ನಷ್ಟು ವಿಸ್ತಾರಗೊಳಿಸುವ ಯೋಜನೆ ರೂಪಿಸಲಾಗಿದೆ . ಸ್ಥಳೀಯರ, ಜನರ ಸಹಕಾರ ಸಿಕ್ಕಲ್ಲಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಬೆಂಬಲಿಸಿದಂತಾಗುವುದು ಅನ್ನುತ್ತಾರೆ ಅವರು.ಕಡಿಮೆ ದರದಲ್ಲಿ ಮಧ್ಯಾಹ್ನದ ಊಟ ನೀಡುವ ಕೆಫೇಗೆ ದಿನಗೂಲಿ ನೌಕರರು ಹೆಚ್ವಿನ ಸಂಖ್ಯೆಯಲ್ಲಿ ಗ್ರಾಹಕರಾಗಿದ್ದಾರೆ. ಒಟ್ಟು ಗುಣಮಟ್ಟದ ಆಹಾರ, ಒಗ್ಗಟ್ಟನ್ನು ಪರಿಗಣಿಸಿ ಜಿಲ್ಲಾ ಪಂಚಾಯಿತಿ ಅಭಿನಂದನೆಗೆ ಆಹ್ವಾನಿಸಿದೆ.