ಕನ್ನಡಪ್ರಭ ವಾರ್ತೆ ವಿಜಯಪುರ

ದಾಂಡೇಲಿ ಸ್ಟರ್ಲಿಂಗ್ ರಿವರ್‌ ರೆಸಾರ್ಟ್‌ನಲ್ಲಿ ಜಿಪ್ ಲೈನ್ ದುರಂತ ಸಂಭವಿಸಿ ನಗರದ ಯುವಕನೊಬ್ಬ ಗಂಭೀರ ಗಾಯಗೊಂಡ ಘಟನೆ ಜು.3ರಂದು ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವಿಜಯಪುರ ನಗರದ ಕುಬೇರ ಸುರಪುರ ಗಾಯಗೊಂಡ ಯುವಕ ಜು.3ರಂದು ದಾಂಡೇಲಿಯ ರೆಸಾರ್ಟ್‌ನಲ್ಲಿ ಜಿಪ್ ಲೈನ್ ಮಾಡುತ್ತಿದ್ದ ವೇಳೆ ಅದರ ಲಾಕ್ ಕಟ್ ಆಗಿ 30-40 ಅಡಿ ಎತ್ತರದಿಂದ ಬಿದ್ದಿದ್ದಾನೆ. ಈ ಭೀಕರ ಅಪಘಾತದ ದೃಶ್ಯ ಆತನ ಸಹೋದರ ಪ್ರಶಾಂತನ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ ಎನ್ನುವಂತಿದೆ.

ಅವಘಡದಲ್ಲಿ ಕುಬೇರನ ಎರಡೂ ಕೈ ಹಾಗೂ ಕಾಲುಗಳ ಎಲುಬು ಮುರಿದಿದ್ದು, ನರಗಳಿಗೆ ಹಾನಿಯಾಗಿದೆ. ತಕ್ಷಣದಲ್ಲೇ ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ನಂತರದಲ್ಲಿ ಮಹಾರಾಷ್ಟ್ರದ ಮೀರಜ್‌ನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ.

ಸ್ಟರ್ಲಿಂಗ್ ರಿವರ್ ರೆಸಾರ್ಟ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ. ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವ ಭರವಸೆ ನೀಡಿದ್ದ ರೆಸಾರ್ಟ್ ಮ್ಯಾನೇಜರ್‌ ಇದೀಗ ಸ್ಪಂದನೆ ನೀಡುತ್ತಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ. ಅಪಘಾತ ಒಪ್ಪಿಕೊಂಡ ರೆಸಾರ್ಟ್ ಮ್ಯಾನೇಜರ್‌ ಈ ಘಟನೆಗೆ ನಿರ್ಲಕ್ಷ್ಯ ಕಾರಣವಲ್ಲ. ಆಕಸ್ಮಿಕ ಘಟನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಶೀಘ್ರ ವಿಜಯಪುರಕ್ಕೆ ಬಂದು ಗಾಯಾಳು ಕುಬೇರನ ಕುಟುಂಬದೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.