ಸಾರಾಂಶ
ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಪಂ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ, ಕಸ ವಿಂಗಡಣೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ, ಸ್ವಚ್ಛ ಗ್ರಾಮವಾಗಿಸುವ ಕೆಲಸವಾಗಬೇಕು ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಹೇಳಿದರು.
ಗಂಗಾವತಿ: ಆನೆಗೊಂದಿ ಗ್ರಾಪಂ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ, ಕಸ ವಿಂಗಡಣೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ, ಸ್ವಚ್ಛ ಗ್ರಾಮವಾಗಿಸುವ ಕೆಲಸವಾಗಬೇಕು ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಹೇಳಿದರು.
ತಾಲೂಕಿನ ಆನೆಗೊಂದಿ ಗ್ರಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಎಸ್‌ಡಬ್ಲ್ಯುಎಂ ಘಟಕವನ್ನು ಗ್ರಾಪಂ ಹಾಗೂ ಸ್ವಸಹಾಯ ಸಂಘದವರು ನಿರ್ವಹಣೆ ಮಾಡುತ್ತಾರೆ. ಇದಕ್ಕೆ ಸಾಹಸ ಸಂಸ್ಥೆ ಸಹಕಾರ ನೀಡಬೇಕು. ಅದಕ್ಕೆ ಸಂಬಂಧಿಸಿದ ಕಾನೂನು ನಿಯಮಗಳನ್ನು ಪಾಲಿಸಿ ಗ್ರಾಪಂಯವರು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.ಸ್ವಸಹಾಯ ಸಂಘದವರು ಮನೆ ಮನೆಗೆ ತೆರಳಿ ಒಣ ಮತ್ತು ಹಸಿ ಕಸ ಸಂಗ್ರಹಿಸಬೇಕು. ಈ ಬಗ್ಗೆ ಶಾಲಾ ಮಕ್ಕಳಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.
ಸ್ವಚ್ಛ ಸಂಕೀರ್ಣ ಘಟಕದ ಬಳಿ ಮೂಲಸೌಲಭ್ಯಗಳಾದ ನೀರು, ಶೌಚಾಲಯ, ಸಂಪೂರ್ಣ ಕಾಂಪೌಂಡ್ ನಿರ್ಮಾಣ ಹಾಗೂ ವಿದ್ಯುತ್ ಸಂಪರ್ಕ ಸೌಲಭ್ಯ ಒದಗಿಸಬೇಕು ಎಂದು ತಾಲೂಕು ಅನುಷ್ಠಾನ ಅಧಿಕಾರಿಗಳು ಹಾಗೂ ಗ್ರಾಪಂ ಅಧಿಕಾರಿಗಳಿಗೆ ಜಿಪಂ ಸಿಇಒ ನಿರ್ದೇಶನ ನೀಡಿದರು.ಎಸ್‌ಡಬ್ಲ್ಯುಎಂ ಘಟಕ ವೀಕ್ಷಣೆ: ಆನೆಗೊಂದಿ ಗ್ರಾಪಂ ವ್ಯಾಪ್ತಿಯ ಕಡೇಬಾಗಿಲು ಗ್ರಾಮದ ಹೊರ ವಲಯದಲ್ಲಿರುವ ಸ್ವಚ್ಛ ಸಂಕೀರ್ಣ (ಎಸ್‌ಡಬ್ಲ್ಯುಎಂ) ಘಟಕ ಸ್ಥಳಕ್ಕೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜವಂಶಸ್ಥರಾದ ರತ್ನರಾಣಿ ಶ್ರೀಕೃಷ್ಣದೇವರಾಯಲು, ಶ್ರೀಕೃಷ್ಣದೇವರಾಯ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ, ಪಿಆರ್‌ಡಿ ಎಇಇ ವಿಜಯಕುಮಾರ್, ಸಿಡಿಪಿಒ ಜಯಶ್ರೀ, ಹವಾಮಾನ ಇಲಾಖೆ ಅಧೀಕ್ಷಕ ಸುರೇಂದ್ರ, ಪುರಾತತ್ವ ಇಲಾಖೆಯ ಧನಂಜಯ್, ಪಿಡಿಒ ಕೃಷ್ಣಪ್ಪ, ಗ್ರಾಪಂ ಅಧ್ಯಕ್ಷೆ ಕೆ.ಮಹಾದೇವಿ, ಸಾಹಸ ಸಂಸ್ಥೆಯ ಮೇಶಾಕ್ ರಾಜ್, ಗ್ರಾಪಂ ಸದಸ್ಯರು, ನರೇಗಾ ಸಿಬ್ಬಂದಿ, ಗ್ರಾಮದ ಮುಖಂಡರು ಇದ್ದರು.