ಕನ್ನಡಪ್ರಭ ವಾರ್ತೆ ಬ್ಯಾಡಗಿ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲ್ಜಿತ್ ಕುಮಾರ ತಾಲೂಕಿನ ಬಿಸಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲಿಕಟ್ಟಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪರಿಶೀಲನೆ ವೇಳೆ ವಿಬಿ.ಜಿ.ರಾಮ.ಜಿ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೂಲಿಕಾರರೊಂದಿಗೆ ನೇರವಾಗಿ ಸಂವಾದ ನಡೆಸಿದ ಅವರು, ಕೆಲಸದ ಸ್ವರೂಪ, ಕಾರ್ಯನಿರ್ವಹಣೆಯ ಸಮಯ ಹಾಗೂ ದಿನಗೂಲಿ ಕುರಿತು ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜುಲೈ 1ರಿಂದ ನರೇಗಾ ಯೋಜನೆಯ ಬದಲಾಗಿ ವಿಕಸಿತ ಭಾರತ ವಿಬಿ.ಜಿ.ರಾಮಜಿ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯಡಿ ಹಿಂದಿನ 100 ಮಾನವ ದಿನಗಳ ಬದಲಾಗಿ 125 ಮಾನವ ದಿನಗಳ ಉದ್ಯೋ ಗ ನೀಡಲಾಗುತ್ತಿದ್ದು, ದಿನಗೂಲಿ ದರವನ್ನು 382ಕ್ಕೆ ಹೆಚ್ಚಿಸಲಾಗಿದೆ.ಇದರಿಂದ ಗ್ರಾಮೀಣ ಕೂಲಿಕಾರರ ಜೀವನೋಪಾಯಕ್ಕೆ ಹೆಚ್ಚಿನ ಆರ್ಥಿಕ ನೆರವು ದೊರೆಯಲಿದೆ ಎಂದು ತಿಳಿಸಿದರು.ವಲಸೆ ಹೋಗಬೇಡಿ: ಪ್ರಸ್ತುತ ಮಳೆ ಕೊರತೆಯಿಂದ ಕೃಷಿ ಕೂಲಿ ಕೆಲಸಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ರೈತರು ಹಾಗೂ ಕೃಷಿ ಕೂಲಿಕಾರರು ಗ್ರಾಮ ಪಂಚಾಯತಿಯಲ್ಲಿ ಕೆಲಸಕ್ಕೆ ಬೇಡಿಕೆ ಸಲ್ಲಿಸಿದರೆ ತಕ್ಷಣವೇ ಉದ್ಯೋಗ ಒದಗಿಸಲಾಗುವುದು. ಉದ್ಯೋ ಗಕ್ಕಾಗಿ ಬೇರೆಡೆಗೆ ವಲಸೆ ಹೋಗುವ ಬದಲು ತಮ್ಮ ಊರಿನಲ್ಲಿಯೇ ದುಡಿದು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಅವರು ಕರೆ ನೀಡಿದರು. ಪ್ರಸ್ತುತ ಕಾಮಗಾರಿಯಲ್ಲಿ 17 ಮಹಿಳೆಯರು ಹಾಗೂ 18 ಪುರುಷರು ಸೇರಿದಂತೆ ಒಟ್ಟು 36 ಮಂದಿ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕೆ.ಎಂ, ಪಿಡಿಒ ಶಿವಾನಂದ ಕುಬಟೂರ, ತಾಂತ್ರಿಕ ಸಹಾಯಕರಾದ ಪ್ರದೀಪ ದೇಸಳ್ಳಿ, ಕಾಯಕ ಬಂಧುಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.