ನರೇಗಾ ಯೋಜನೆ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ

| Published : Apr 23 2025, 12:33 AM IST

ಸಾರಾಂಶ

ತಾಲೂಕಿನ ಕೊಂಚಿಗೇರಿ, ದಾಸಾಪುರ, ಮುದ್ದಟ್ಟನೂರು, ಶಿರಿಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ಕೈಗೆತ್ತಿಕೊಂಡಿರುವ ನಾಲಾಗಳಲ್ಲಿ ಹೂಳೆತ್ತುವ ಮತ್ತು ಕೆರೆಗಳ ಪುನಶ್ಚೇತನ ಕಾಮಗಾರಿಗಳ ಪ್ರಗತಿಯನ್ನು ಜಿಪಂ ಸಿಇಒ ಮಹ್ಮದ್ ಹ್ಯಾರೀಸ್ ಸುಮೈರ್ ಅವರು ಸೋಮವಾರ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಸಿರುಗುಪ್ಪ

ತಾಲೂಕಿನ ಕೊಂಚಿಗೇರಿ, ದಾಸಾಪುರ, ಮುದ್ದಟ್ಟನೂರು, ಶಿರಿಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ಕೈಗೆತ್ತಿಕೊಂಡಿರುವ ನಾಲಾಗಳಲ್ಲಿ ಹೂಳೆತ್ತುವ ಮತ್ತು ಕೆರೆಗಳ ಪುನಶ್ಚೇತನ ಕಾಮಗಾರಿಗಳ ಪ್ರಗತಿಯನ್ನು ಜಿಪಂ ಸಿಇಒ ಮಹ್ಮದ್ ಹ್ಯಾರೀಸ್ ಸುಮೈರ್ ಅವರು ಸೋಮವಾರ ಪರಿಶೀಲಿಸಿದರು.

ಸಿರಿಗೇರಿ ಗ್ರಾಮದ ಭೈರಾಪುರ ರಸ್ತೆಯಲ್ಲಿ ನರೇಗಾದಡಿಯಲ್ಲಿ 1095 ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಮೇಟಿ ಮತ್ತು ಕಾರ್ಮಿಕರ ಜತೆ ಮಾತನಾಡಿದ ಸಿಇಒ, ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೀರಿ? ಕೂಲಿ ಎಷ್ಟು ಪಡೆಯುತ್ತಿದ್ದೀರಿ? ನಿಮಗೆ ಅಳತೆ ಸರಿಯಾಗಿ ನೀಡುತ್ತಿದ್ದಾರಾ? ಎಂಬಿತ್ಯಾದಿ ಮಾಹಿತಿ ಕೇಳಿದರು.

ಅಂಗವಿಕಲರು ಹಾಗೂ ವೃದ್ಧರನ್ನು ಮಾತನಾಡಿಸಿ ಕುಶಲೋಪರಿ ವಿಚಾರಿಸಿದರು. ಆನಂತರ ಪಿಡಿಒ, ಅಧಿಕಾರಿಗಳಿಗೆ ಕೂಲಿ ಕಾರ್ಮಿಕರು ಹಾಜರಾದವರಿಗೆ ಮಾತ್ರ ಹಾಜರಾತಿ ಹಾಕಿ, ಹಿರಿಯ ನಾಗರಿಕರಿಗೆ, ಗರ್ಭಿಣಿಯರು, ಅಂಗವಿಕಲರಿಗೆ ಅರ್ಧದಷ್ಟು ಕೆಲಸ ನೀಡುವಂತೆ ಸೂಚಿಸಿದರು. ಸಿರಿಗೇರಿ ಗ್ರಾಪಂ ಕೂಸಿನ ಮನೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ಹಾಜರಾತಿ, ರಿಜಿಸ್ಟ್ರಾರ್ ಹಾಗೂ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಪರಿಶೀಲನೆ ಮಾಡಿದರಲ್ಲದೆ, ಯಾವುದೇ ಕಾರಣಕ್ಕೂ ಮಕ್ಕಳಿಗೆ ತೊಂದರೆ ಆಗದೆ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸೂಚಿಸಿದರು.

ತಾಪಂ ಇಒ ಪವನ್ ಕುಮಾರ್ ಎಸ್. ದಂಡಪ್ಪನವರ, ನರೇಗಾ ಸಹಾಯಕ ನಿರ್ದೇಶಕ ಮನೋಹರ, ತಾಂತ್ರಿಕ ಸಂಯೋಜಕ ಪ್ರದೀಪ್ ಕುಮಾರ್, ಐಇಸಿ ಸಂಯೋಜಕ ಸುರೇಶ್, ಪಿಡಿಒ ಯು. ರಾಮಪ್ಪ, ಕಾರ್ಯದರ್ಶಿ ವೀರೇಶ್, ಬಿಎಫ್‌ಟಿ, ಜಿವಿಕೆ, ಮೇಟಿಗಳು, ಕಾಯಕ ಮಿತ್ರರು, ಗ್ರಾಪಂ ಸಿಬ್ಬಂದಿ ಇದ್ದರು.