ಐಗಳಿಯಲ್ಲಿ ಜಿಪಂ ಸಿಇಒ ರಾಹುಲ್‌ ಶಿಂಧೆ ಮಿಂಚಿನ ಸಂಚಾರ

| Published : Nov 15 2024, 12:35 AM IST

ಸಾರಾಂಶ

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಗುರುವಾರ ಐಗಳಿ ಗ್ರಾಮ ಪಂಚಾಯತಿ ಕಾರ್ಯಾಲಯ, ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ವಸತಿ ನಿಲಯಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯ ಹಾಗೂ ಮಕ್ಕಳಿಗೆ ವಿತರಿಸುವ ಬಿಸಿಊಟ ಹಾಗೂ ಮೊಟ್ಟೆಯ ಬಗ್ಗೆ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಐಗಳಿ

ಗ್ರಾಮ ಪಂಚಾಯತಿಯ ಅಭಿವೃದ್ಧಿ ಕಾರ್ಯ ವೀಕ್ಷಿಸಿದ ಅವರು, ನಂತರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮದ್ಯಾಹ್ನದ ಬಿಸಿಊಟ ಹಾಗೂ ಮೊಟ್ಟೆ ವಿತರಣೆ ಬಗ್ಗೆ ಮಾಹಿತಿ ಪಡೆದು ಸರಿಯಾಗಿ ತಲುಪುತ್ತದೆಯೇ ? ಎಂದು ಮಕ್ಕಳನ್ನು ವಿಚಾರಿಸಿದರು. ಶಾಲಾ ಮೈದಾನ, ಹೂದೋಟ ಮತ್ತು ಸ್ವಚ್ಛತೆ ಬಗ್ಗೆ ಗಮನಿಸಿದರು. ನಂತರ ಪಡತರವಾಡಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು.

ಗ್ರಾಪಂ ಕಾರ್ಯಾಲಯದಲ್ಲಿ ಗ್ರಾಮದ ಹಿರಿಯರಾದ ಸಿ.ಎಸ್. ನೇಮಗೌಡ ಮಾತನಾಡಿ, ಗ್ರಾಮದ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ಹಳ್ಳಿಗೆ ಬ್ರಿಜ್ಡ್‌ ಇದ್ದು, ನೀರು ತಡೆಯಲು ತಡೆಗೋಡೆ ಕಟ್ಟಡ ಕಾಮಗಾರಿಗೆ ಮಂಜೂರಾತಿ ನೀಡಬೇಕು. ಇದು ಜಿಲ್ಲೆಯ ಕೊನೆ ಹಳ್ಳಿ. ಅಭಿವೃದ್ಧಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಿ ಎಂದು ಮನವಿ ಮಾಡಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಜಿಪಂ ಈರಣ್ಣ ವಾಲಿ, ಸಿಡಿಪಿಒ, ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಪಿಡಿಒ ರಾಜೇಂದ್ರ ಪಾಠಕ, ಗ್ರಾಪಂ ಅಧ್ಯಕ್ಷೆ ಶಕುಂತಲಾ ಪಾಟೀಲ, ಸದಸ್ಯ ರವೀಂದ್ರ ಹಾಲಳ್ಳಿ, ಗುರಪ್ಪ ಬಿರಾದಾರ, ಮುಖ್ಯ ಶಿಕ್ಷಕ ಬಿ.ಎಸ್. ಅಡಹಳ್ಳಿ ಸೇರಿದಂತೆ ಗ್ರಾಪಂ ಸದಸ್ಯರು, ಸಹ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.