ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಪಶು ಚಿಕಿತ್ಸಾಲಯಕ್ಕೆ ಜಿಪಂ ಸಿಇಒ ರಾಹುಲ ಶಿಂಧೆ ಗುರುವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ಔಷಧ ದಾಸ್ತಾನು ವಹಿ, ಲಸಿಕಾ ವಹಿ, ಕೃತಕ ಗರ್ಭಧಾರಣೆ ವಹಿಗಳನ್ನು ಪರಿಶೀಲಿಸಿದರು.ಬಳಿಕ ಕುಂದರಗಿ ಗ್ರಾಪಂ ವ್ಯಾಪ್ತಿಯ ಗೋಡಚಿನಮಲ್ಕಿ ಗ್ರಾಮಕ್ಕೆ ಭೇಟಿ ನೀಡಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಡಿ ಎನ್ಎಲ್ಎಂಇಡಿಪಿ ಯೋಜನೆಯಡಿ ನಿರ್ಮಾಣವಾದ 525ರ ಮೇಕೆ ಘಟಕಗಳನ್ನು ವೀಕ್ಷಣೆ ಮಾಡಿದರು. ಶೆಡ್‌ನಲ್ಲಿ ಸುಮಾರು 496 ಮೇಕೆ ಇದ್ದವು. ಫಲಾನುಭವಿ ಮಹಮ್ಮದ್ ಷರೀಫ್ ಮುಕ್ತುಂಸಾಬ್ ಪಾಟೀಲಗೆ ಆಡು ಸಾಕಾಣಿಕೆಯಿಂದ ಬರುವ ಆದಾಯ, ಖರ್ಚುಗಳು ಬಗ್ಗೆ ಚರ್ಚಿಸಿ ಹಲವು ಸಲಹೆ ಸೂಚನೆ ನೀಡಿದರು.
ಗೋಕಾಕ ತಾಲೂಕಿನ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಭಾಭವನದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಅಧಿಕಾರಿ, ಸಿಬ್ಬಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಕೆಡಿಪಿ ವಾರ್ಷಿಕ ಗುರಿಗಳನ್ವಯ ಪ್ರಗತಿ ಸಾಧಿಸಲು ಕಟ್ಟುನಿಟ್ಟಿನ ನಿರ್ದೇಶನ ಹಾಗೂ 21ನೇ ಜಾನುವಾರು ಗಣತಿ ಸರಿಯಾಗಿ ನಿರ್ವಹಿಸಲು ಕ್ರಮ ವಹಿಸುವಂತೆ ಸೂಚಿಸಿದರು.ಸಭೆಯಲ್ಲಿದ್ದ ಗೋಕಾಕ ತಾಪಂ ಇಒ ಪರಶುರಾಮ ಗಸ್ತಿ ಜೊತೆಗೆ ಚರ್ಚಿಸಿದ ಸಿಇಒ ತಾಪಂ ವ್ಯಾಪ್ತಿಯ 33 ಗ್ರಾಪಂಗಳಲ್ಲಿ ಮನರೇಗಾ ಯೋಜನೆಯಡಿ ಪ್ರತಿ ಗ್ರಾಪಂಗೆ 50 ದನದ ಶೆಡ್ /ಕುರಿ ಶೆಡ್ ಗಳ ಕ್ರಿಯಾಯೋಜನೆ ಸಿದ್ಧಪಡಿಸಿ ಅಭಿಯಾನ ರೂಪದಲ್ಲಿ ಅನುಷ್ಠಾನಗೊಳಿಸಲು ಹಾಗೂ ಪಶುಪಾಲನೆ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಆಯಾ ಗ್ರಾಮಗಳ ಮಟ್ಟದಲ್ಲಿ ಫಲಾನುಭವಿಗಳನ್ನು ಗುರುತಿಸುವಾಗ ಅವರಲ್ಲಿರುವ ದನಕರುಗಳ ಮಾಹಿತಿ ಪಡೆದು ದೃಢೀಕರಣ ಪತ್ರ ನೀಡಲು ಸೂಚಿಸಿದರು.
ವಿವಿಧ ಲಸಿಕಾ ಕಾರ್ಯಕ್ರಮಗಳನ್ನು ಶೇ.100ರಷ್ಟು ಪ್ರಗತಿ ಸಾಧಿಸಲು ಪಶುಪಾಲನೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಹಾಜರಿದ್ದ ಎಲ್ಲ ಪಶು ಸಖಿಯರಿಗೆ ದಿನದ ವಹಿಗಳನ್ನು ವಿತರಿಸಿ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವಲ್ಲಿ ಇಲಾಖೆ ಮತ್ತು ರೈತ ಬಾಂಧವರ ಜೊತೆಗೆ ಕೊಂಡಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಪಶುಪಾಲನೆ ಹಾಗೂ ವೈದಕಿಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ರಾಜೀವ ಕುಲೇರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತಿ , ತಹಸೀಲ್ದಾರ್ ಡಾ.ಮೋಹನ್ ಭಸ್ಮೆ, ಸಹಾಯಕ ಕಾರ್ಯಪಾಲಕ ಅಭಿಯಂತರ ಉದಯಕುಮಾರ ಕಾಂಬಳೆ, ಸಹಾಯಕ ನಿರ್ದೇಶಕ (ಪಂಚಾಯತರಾಜ್) ವಿನಯಕುಮಾರ ಹಾಗೂ ಪಶುಪಾಲನೆ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.