ಸಾರಾಂಶ
ಲಕ್ಷ್ಮೇಶ್ವರ: ಸಮೀಪದ ರಾಮಗಿರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸಾಪುರ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ನಿರ್ಮಾಣವಾಗಿರುವ ಸಿಸಿ ಚರಂಡಿ, ಸಿಸಿ ರಸ್ತೆಗಳನ್ನು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಭರತ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ರಾಮಗಿರಿ ಸರ್ಕಾರಿ ಪ್ರೌಢಶಾಲೆಗೆ ದಿಢೀರ್ ಭೇಟಿ ನೀಡಿ, ಮಕ್ಕಳ ದಾಖಲಾತಿ, ಬೋಧನಾ ಗುಣಮಟ್ಟ, ಸಿಬ್ಬಂದಿ ಹಾಜರಾತಿ, ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಶೈಕ್ಷಣಿಕ ಪ್ರಗತಿ, ಶಾಲಾ ಶೌಚಾಲಯ, ಅಡಿಗೆ ಕೋಣೆಗಳಿಗೆ ಭೇಟಿ ನೀಡಿ, ಅಡಿಗೆ ಸಿಬ್ಬಂದಿಗಳೊಂದಿಗೆ ಮಾತನಾಡಿ, ಬಿಸಿ ಊಟಕ್ಕೆ ಬಳಸುವ ಮೆನು ಚಾರ್ಟ್, ಆಹಾರ ಧಾನ್ಯಗಳ ಗುಣಮಟ್ಟ ಪರೀಕ್ಷಿಸಿ ಉತ್ತಮವಾಗಿ ಸ್ವಚ್ಛವಾಗಿ ಅಡುಗೆ ಮಾಡಿ ಮಕ್ಕಳಿಗೆ ನೀಡಬೇಕೆಂದು ಸಲಹೆ ನೀಡಿದರು.ಅಕ್ಷರ ದಾಸೋಹಕ್ಕೆ ಬಳಕೆ ಮಾಡುವ ತರಕಾರಿ, ಸೊಪ್ಪು, ಮಕ್ಕಳಿಗೆ ವಿತರಿಸುವ ಮೊಟ್ಟೆ ಬಾಳೆ ಹಣ್ಣಿನ ಬಗ್ಗೆ ಮಾಹಿತಿ ಪಡೆದು ಸ್ವಚ್ಛತೆ ವೀಕ್ಷಿಸಿದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಸಿ ನೆಡುವುದರ ಮೂಲಕ ಪರಿಸರ ದಿನಾಚರಣೆಯ ಜಾಗೃತಿಯನ್ನು ಮೂಡಿಸಿದರು.
ನಂತರ ಶಾಲಾ ಕೊಠಡಿಗೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ವಿಜ್ಞಾನದ ವಿಷಯವಾಗಿ ಪರಸ್ಪರ ಸಂವಾದ ಮಾಡಿದರು. ನಂತರ ಲಕ್ಷ್ಮೇಶ್ವರ ಪಟ್ಟಣದ ಡಿ. ದೇವರಾಜ್ ಅರಸ್ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಆಹಾರದ ಗುಣಮಟ್ಟ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸ್ನಾನ ಗೃಹ, ಶೌಚಾಲಯಗಳ ಸ್ವಚ್ಛತೆ ವೀಕ್ಷಿಸಿದರು.ಪಟ್ಟಣದ ವೀರಗಂಗಾಧರ ಸರ್ಕಾರಿ ಪ್ರೌಢಶಾಲೆಗೆ ದಿಢೀರ್ ಭೇಟಿ ನೀಡಿ ಮಕ್ಕಳ ದಾಖಲಾತಿ, ಶಿಕ್ಷಕರ ಬೋಧನಾ ಗುಣಮಟ್ಟ, ಎಸ್.ಎಸ್. ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದ ಮಾಹಿತಿ ಪಡೆದರು. ಈ ವೇಳೆ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 100% ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಉತ್ತೀರ್ಣರಾಗಿದ್ದ ಮಾಹಿತಿ ಪಡೆದು ಆಂಗ್ಲಭಾಷೆ ಶಿಕ್ಷಕಿ ಎ.ಎಂ.ಕುಂಬಾರ ಅವರನ್ನು ಅಭಿನಂದಿಸಿದರು. ಇದೇ ರೀತಿ ಎಲ್ಲಾ ಶಿಕ್ಷಕರು ತಮ್ಮ ವಿಷಯಗಳ ಬಗ್ಗೆ ಗಮನಹರಿಸಿ ಪ್ರಗತಿ ಸಾಧಿಸಲು ಸಲಹೆ ನೀಡಿದರು.
ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗದೀಶ್ ಕುರುಬರ, ತಾಂತ್ರಿಕ ಸಂಯೋಜಕ ಹರೀಶ್ ಸೊಬರದ, ತಾಲೂಕು ಐಇಸಿ ಸಂಯೋಜಕ ಮಂಜುನಾಥ ಸ್ವಾಮಿ ಎಚ್. ಎಂ., ತಾಂತ್ರಿಕ ಸಹಾಯಕ ಶ್ರೀನಿವಾಸ್, ಗ್ರಾಮ ಪಂಚಾಯತಿ ಸಿಬ್ಬಂದಿ, ಶಾಲಾ ಶಿಕ್ಷಕರು, ಶಾಲಾ ಸಿಬ್ಬಂದಿ, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))