ಸಾರಾಂಶ
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹಲವು ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ಭೇಟಿ ನೀಡಿ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಸಿರಿಗೆರೆ ಸುತ್ತಲಿನ ಹಲವು ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಂಗಳವಾರ ಭೇಟಿ ನೀಡಿ, ಜಲಜೀವನ್ ಮಿಷನ್ (ಜೆಜೆಎಂ) ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ವೀಕ್ಷಣೆ ಮಾಡಿದರು.ಹುಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲ್ಲೂರು ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ಪರಿವೀಕ್ಷಣೆ ನಡೆಸಿ, ಜಲ ಸಂಗ್ರಹಾಗಾರದ ಸುತ್ತಲೂ ತಂತಿಬೇಲಿ ಅಳವಡಿಸಲು ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು. ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಹಾಗೂ ಮಕ್ಕಳ ಹಾಜರಾತಿ, ಮಧ್ಯಾಹ್ನದ ಬಿಸಿ ಊಟದ ಬಗ್ಗೆ ಪರಿಶೀಲಿಸಿದರು.
ಬೊಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ಲೇಗುದ್ದು ಗ್ರಾಮದ ಬಳಿ ಇರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸಮತೋಲನ ಜಲಸಂಗ್ರಹಗಾರ ವೀಕ್ಷಣೆ ನಡೆಸಿ, ಡಿಆರ್‌ಎಸ್ ಇನ್‍ಪ್ರಾಸ್ಟ್ರೇಕ್ಚರ್ ಅವರಿಗೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು. ಕಡ್ಲೇಗುದ್ದು ಗ್ರಾಮದ ಜಲಜೀವನ್ ಮಿಷನ್ ಕಾಮಗಾರಿ ವೀಕ್ಷಿಸಲಾಗಿ ಯೋಜನೆಯ ನಾಮಫಲಕ ಅಳವಡಿಸಲು ಸೂಚಿಸಲಾಗಿ ಗ್ರಾಮದ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದು, ಗ್ರಾಮದ ಬಹುತೇಕ ಮನೆಗಳು, ಶಾಲೆ ಹಾಗೂ ಅಂಗನವಾಡಿಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯು ಉತ್ತಮವಾಗಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರು.ಕಡ್ಲೇಗುದ್ದು ಗ್ರಾಮದಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರು ಸಾರ್ವಜನಿಕರಿಗೆ ಸಿಗುವಂತೆ ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು, ಶಾಸಕರು ಉದ್ಘಾಟನೆ ನೆರವೇರಿಸುವರು ಎಂದು ತಿಳಿಸಿದರು.
ಕೊಳಹಾಳ್ ಗ್ರಾಪಂ ವ್ಯಾಪ್ತಿಯ ಕಸವನಹಳ್ಳಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಪರಿವೀಕ್ಷಣೆ ಮಾಡಿ, ಗ್ರಾಮದ ಎಲ್ಲಾ ಕಾಲೋನಿಗಳಿಗೆ ಭೇಟಿ ನೀಡಿ ಕಾಲೋನಿಯಲ್ಲಿ ನಿರ್ವಹಿಸಿರುವ ನಳ ಸಂಪರ್ಕ ಕಾಮಗಾರಿಯ ಗುಣಮಟ್ಟ ಶ್ಲಾಘಿಸಿದರು.ಜಲಜೀವನ್ ಮಿಷನ್ ಯೋಜನೆಯ ಕಾರ್ಯಾತ್ಮಕ ನಳ ಸಂಪರ್ಕದ ಮೂಲಕವೇ ನೀರು ಸರಬರಾಜು ಮಾಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರಿಗೆ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು.