ಅಂಗನವಾಡಿಯಲ್ಲಿ ಮಕ್ಕಳ ಹಾಜರಾತಿ ಸೇರಿದಂತೆ ಇತರೆ ದಾಖಲೆ ನಿರ್ವಹಣೆ ಸುಧಾರಣೆ ಮಾಡುವಲ್ಲಿ ಮೇಲ್ವಿಚಾರಕರ ಕಾರ್ಯ ತೃಪ್ತಿಕರವಾಗಿಲ್ಲವೆಂದು ಜಿಪಂ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಶಶಿಧರ ಕುರೇರ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಂಗನವಾಡಿಯಲ್ಲಿ ಮಕ್ಕಳ ಹಾಜರಾತಿ ಸೇರಿದಂತೆ ಇತರೆ ದಾಖಲೆ ನಿರ್ವಹಣೆ ಸುಧಾರಣೆ ಮಾಡುವಲ್ಲಿ ಮೇಲ್ವಿಚಾರಕರ ಕಾರ್ಯ ತೃಪ್ತಿಕರವಾಗಿಲ್ಲವೆಂದು ಜಿಪಂ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಶಶಿಧರ ಕುರೇರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಭವನದ ಆರೋಗ್ಯ ಇಲಾಖೆಯ ಸಭಾಭವನದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ವಾಸ್ತವ ಸ್ಥಿತಿಗೆ ಅನುಗುಣವಾಗಿ ಇಲ್ಲ. ಪೋಷನ್ ಟ್ರ್ಯಾಕ್ ಹಾಜರಾತಿ ಪರಿಶೀಲಿಸಿದಾಗ ನೂರರಷ್ಟು ಹಾಜರಾತಿ ಇರುತ್ತದೆ. ಇದನ್ನು ನೋಡಿದರೆ ನಿರ್ವಹಣೆಯಲ್ಲಿ ಲೋಪ ಕಂಡುಬರುತ್ತದೆ ಎಂದು ಹೇಳಿದರು.

ಮಕ್ಕಳ ಹಾಜರಾತಿ ಈ ಬಗ್ಗೆ ಮೇಲ್ವಿಚಾರಕಿಯರಿಗೆ ತಿಳಿದಿದ್ದರೂ ಸುಧಾರಿಸುವಲ್ಲಿ ವಿಫಲರಾಗಿದ್ದಾರೆ. ಇಂತಹ ಮನಸ್ಥಿತಿಗೆ ಅಸಮಾಧಾನ ವ್ಯಕ್ತಪಡಿಸಿದ ಸಿಇಒ ಅವರು ಮೇಲ್ವಿಚಾರಕರು ತಮ್ಮ ಜವಾಬ್ದಾರಿ ಅರಿತು ಅಂಗನವಾಡಿ ಸುಧಾರಣೆಗೆ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಖಡಕ್‌ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಬಾಡಿಕೆ ಕಟ್ಟಡಗಳ ಮೇಲೆ ಅಂಗನವಾಡಿ ಕೇಂದ್ರಗಳು ನಡೆಯುತ್ತಿದ್ದು, ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿವೇಶನ ಗುರುತಿಸಿರುವ ಬಗ್ಗೆ ಪರೀಶೀಲಿಸಲಾಗಿ ಜಿಲ್ಲೆಯಲ್ಲಿ 545 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅದರಲ್ಲಿ ನಗರ ಪ್ರದೇಶದಲ್ಲಿ 396, ಗ್ರಾಮೀಣ ಭಾಗದಲ್ಲಿ 149 ಸೇರಿವೆ. ಬಾಗಲಕೋಟೆ ನಗರದಲ್ಲಿ 12 ಬಾಡಿಗೆ ಕಟ್ಟಡದಲ್ಲಿದ್ದು, 8ಕ್ಕೆ ನಿವೇಶನ ಪಡೆಯಲಾಗಿದೆ. ಹಳೇ ನಗರದಲ್ಲಿ ಮುಳುಗಡೆ ಪ್ರದೇಶವಿರುವುದರಿಂದ ನಿವೇಶನ ಗುರುತಿಸಲು ಸಾಧ್ಯವಾಗುತ್ತಿಲ್ಲವೆಂದು ಮೇಲ್ವಿಚಾರಕಿ ವೀಣಾ ಸಭೆಗೆ ತಿಳಿದರು.

ಹುನಗುಂದಲ್ಲಿ 6, ಇಳಕಲ್ಲದಲ್ಲಿ 11 ಸಿಎ ಸೈಟ್‌ ಗುರುತಿಸಲಾಗಿದೆ. ಉಳಿದ ತಾಲೂಕಿನ ಮೇಲ್ವಿಚಾರಕಿಯರು ಅಗತ್ಯವಿರುವ ನಿವೇಶನ ಗುರುತಿಸಲು ಸೂಚಿಸಿದ ಅವರು, ಬರುವ ಮಾರ್ಚ್‌ ಒಳಗಾಗಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿಗಳಿಗ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸೂಕ್ತ ನಿವೇಶನ ಗುರುತಿಸಿ ಮಾಹಿತಿ ನೀಡಿದಲ್ಲಿ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಇದಕ್ಕಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿದಂತೆ ಆಯಾ ವ್ಯಾಪ್ತಿಯ ಮೇಲ್ವಿಚಾರಕಿಯರು ಶ್ರಮವಹಿಸು ಕೆಲಸವಾಗಬೇಕೆಂದು ತಿಳಿಸಿದರು.

ಅಂಗನವಾಡಿ ಕೇಂದ್ರಗಳ ಫಲಾನುಭವಿಗಳ ವಿವರ, ಮೂಲ ಸೌಕರ್ಯ, ಮಕ್ಕಳ ತೂಕ ಮತ್ತು ಅಪೌಷ್ಟಿಕ ಮಕ್ಕಳ ಮಾಹಿತಿಗಳ ಬಗ್ಗೆ ಚರ್ಚೆ ನಡೆಸಿದರು. ಪ್ರಸಕ್ತ ಸಾಲಿನ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕ ಕೆ.ಪ್ರಭಾಕರ ಸೇರಿದಂತೆ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.