ಸಾರಾಂಶ
ಬಾಗಲಕೋಟೆ: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶೀಧರ ಕುರೇರ ತಾಲೂಕಿನ ಬೇವಿನಮಟ್ಟಿ, ಭಗವತಿ, ಹಳ್ಳೂರ, ಬೇವೂರ ಗ್ರಾಮಗಳಿಗೆ ಭೇಟಿ ನೀಡಿ ರಸ್ತೆ ಕಾಮಗಾರಿ, ಅರಣ್ಯೀಕರಣ ಹಾಗೂ ಎಸ್‌ಡಬ್ಲುಎಂ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶೀಧರ ಕುರೇರ ತಾಲೂಕಿನ ಬೇವಿನಮಟ್ಟಿ, ಭಗವತಿ, ಹಳ್ಳೂರ, ಬೇವೂರ ಗ್ರಾಮಗಳಿಗೆ ಭೇಟಿ ನೀಡಿ ರಸ್ತೆ ಕಾಮಗಾರಿ, ಅರಣ್ಯೀಕರಣ ಹಾಗೂ ಎಸ್‌ಡಬ್ಲುಎಂ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.ಪಂಚಾಯತ ರಾಜ್ ವಿಭಾಗದಿಂದ ಬೇವೂರದಿಂದ ಗಂಜಿಹಾಳದವರೆಗೆ ನಡೆದ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಿಇಒ ಅವರು ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸುವಂತೆ ಅಭಿಯಂತರರಿಗೆ ಸೂಚಿಸಿದರು. ನಂತರ ಭಗವತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾದಡಿ ಹಮ್ಮಿಕೊಂಡ ರಸ್ತೆ ಬದಿ ನಡೆತೋಪು, ಅರಣ್ಯೀಕರಣ ಕಾಮಗಾರಿಗಳನ್ನು ಪರಿಶೀಲಿಸಿದರು.
ಹಳ್ಳೂರ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಹಾಜರಾತಿ, ಮಕ್ಕಳಿಗೆ ವಿತರಿಸುವ ಆಹಾರ ಪದಾರ್ಥಗಳ ದಾಖಲೆ ಪುಸ್ತಕ ಪರಿಶೀಲನೆ ಮಾಡಿದರು. ನಿಯಮಾನುಸಾರ ಮೆನುವಿನನ್ವಯ ಮಕ್ಕಳಿ ಆಹಾರ ವಿತರಣೆ ಆಗಬೇಕು. ವ್ಯತ್ಯಾಸ ಕಂಡುಬಂದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದೆಂದು ಅಂಗನವಾಡಿ ಕಾರ್ಯಕರ್ತರಿಗೆ ಸೂಚಿಸಿದರು. ಭೇಟಿ ಸಮಯದಲ್ಲಿ ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.