ಸಾರಾಂಶ
ಪಟ್ಟಣದ ಹರಿಕೃಪಾ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ಹಮಮ್ಮದ್ ಹ್ಯಾರೀಸ್ ಸುಮೈರ್ ಬುಧವಾರ ಭೇಟಿ ನೀಡಿ ಕೊಠಡಿಗಳ ಸ್ಥಿತಿಗತಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಕುರುಗೋಡು
ಪಟ್ಟಣದ ಹರಿಕೃಪಾ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ಹಮಮ್ಮದ್ ಹ್ಯಾರೀಸ್ ಸುಮೈರ್ ಬುಧವಾರ ಭೇಟಿ ನೀಡಿ ಕೊಠಡಿಗಳ ಸ್ಥಿತಿಗತಿ ಪರಿಶೀಲಿಸಿದರು.ಕಳೆದ ವರ್ಷ ಸುರಿದ ಭಾರಿ ಮಳೆಗೆ ಶಾಲೆಯ ಕೊಠಡಿಯ ತಳಪಾಯ ಸಂಪೂರ್ಣ ಕೊಚ್ಚಿಹೋಗಿತ್ತು. ಕಳೆದ ಒಂದು ವಾರರಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಶಾಲೆಗೆ ಭೇಟಿ ನೀಡಿ ಅವರು ಪರಿಶೀಲಿಸಿದರು.
ಶಾಲೆಯ ಕಟ್ಟಡಕ್ಕೆ ಹೊಂದಿಕೊಂಡಿರುವ ಅಂಗನವಾಡಿ ಕೇಂದ್ರ ಮತ್ತು ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ಶಾಲೆಗೆ ಭೇಟಿ ನೀಡಿದ ಅವರು ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಮಾಹಿತಿ ಪಡೆದರು.ತರಗತಿ ಕೊಠಡಿಗೆ ಭೇಟಿ ನೀಡಿದ ಅವರು ಶಾಲೆಯಲ್ಲಿ ಗಣಿತ ವಿಷಯ ಬೋಧಿಸಿದ ಅವರು ಪ್ರಶ್ನೆ ಕೇಳಿ ವಿದ್ಯಾರ್ಥಿಗಳಿಂದ ಸರಿ ಉತ್ತರ ಪಡೆದು ಖುಷಿಪಟ್ಟರು.
ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಕುಸಿತವಾಗಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಚರ್ಚಿಸಿದ ಅವರು ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಶಾಲೆಗಳ ಶೌಚಾಲಯಗಳ ನಿರ್ವಹಣೆ ಬಗ್ಗೆ ಹೆಚ್ಚು ನಿಗಾವಹಿಸಬೇಕು ಎಂದು ಸೂಚಿಸಿದರು.ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ಪಟ್ಟಿ ಮಾಡಿ ಕೊಡಬೇಕು. ತುರ್ತು ಅಗತ್ಯವಿರುವ ಕಡೆ ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ ನೀಡಿದರು.
ತಾಪಂ ಇಒ ಕೆ.ವಿ. ನಿರ್ಮಲಾ, ಬಿಇಒ ಸಿದ್ದಲಿಂಮೂರ್ತಿ, ಮುಖ್ಯ ಶಿಕ್ಷಕ ತುಕಾರಾಮ್ ಗೊರವ ಇದ್ದರು.