ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಗ್ರಾಮ ಪಂಚಾಯಿತಿಗಳ ಆರ್ಥಿಕ ಸ್ವಾವಲಂಬನೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಬೃಹತ್ ತೆರಿಗೆ ಸಂಗ್ರಹ ಅಭಿಯಾನಕ್ಕೆ ಜಿಪಂ ಸಿಇಒ ಶಶಿಧರ ಕುರೇರ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಚಾಲನೆ ನೀಡಿದರು.ಬಾಗಲಕೋಟೆ ತಾಲೂಕಿನ ಕಲಾದಗಿ, ಖಜ್ಜಿಡೋಣಿ, ದೇವನಾಳ, ತುಳಸಿಗೇರಿ ಹಾಗೂ ಗದ್ದನಕೇರಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಅವರು, ತೆರಿಗೆ ಸಂಗ್ರಹ ಪ್ರಗತಿ, ಬಾಕಿ ತೆರಿಗೆ ಪಟ್ಟಿ, ದಿನನಿತ್ಯದ ವಸೂಲಾತಿ ದಾಖಲೆಗಳು ಹಾಗೂ ಇ-ಗ್ರಾಮ ಸ್ವರಾಜ್ ಪೋರ್ಟಲ್‌ನಲ್ಲಿ ದಾಖಲಾದ ಮಾಹಿತಿ ಪರಿಶೀಲಿಸಿದರು. ತೆರಿಗೆ ವಸೂಲಾತಿ ಗುರಿ ನಿಗದಿ ಮಾಡಿ ವಾರವಾರ ಪ್ರಗತಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ಅವರು, ಗ್ರಾಮದ ರಸ್ತೆ, ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ, ಒಳಚರಂಡಿ ಹಾಗೂ ಇತರೆ ಮೂಲ ಸೌಲಭ್ಯಗಳ ನಿರ್ವಹಣೆಗಾಗಿ ತೆರಿಗೆ ಆದಾಯವೇ ಪ್ರಮುಖ ಆಧಾರವಾಗಿದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರೂ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಬೇಕು ಎಂದು ಕರೆ ನೀಡಿದರು.ಅಭಿಯಾನ ನಿಮಿತ್ತ ಮನೆ ಮನೆಗೆ ಭೇಟಿ ನೀಡಿ ಬಾಕಿ ಇರುವ ಆಸ್ತಿ ತೆರಿಗೆ, ನೀರಿನ ಶುಲ್ಕ ಹಾಗೂ ಇತರೆ ಕರಗಳನ್ನು ಪಾವತಿಸುವಂತೆ ಮನವಿ ಮಾಡಲಾಯಿತು. ದೀರ್ಘಕಾಲ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ನಿಯಮಾನುಸಾರ ನೋಟಿಸ್ ಜಾರಿಗೊಳಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಗ್ರಾಪಂ ಸಿಬ್ಬಂದಿಗೆ ದಾಖಲೆ ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಪಾಡುವುದು, ಆದಾಯ-ಖರ್ಚಿನ ಲೆಕ್ಕಪತ್ರ ನವೀಕರಿಸುವುದು ಹಾಗೂ ಆನ್‌ಲೈನ್ ವ್ಯವಸ್ಥೆ ಸಮರ್ಪಕವಾಗಿ ಬಳಸುವಂತೆ ಮಾರ್ಗದರ್ಶನ ನೀಡಿದರು. ಮುಂದಿನ 15 ದಿನಗಳೊಳಗೆ ತೆರಿಗೆ ವಸೂಲಾತಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಬೇಕು. ಅಗತ್ಯವಿದ್ದಲ್ಲಿ ಮರುಪರಿಶೀಲನಾ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ಅಭಿಯಾನವನ್ನು ಜನಸಹಭಾಗೀತ್ವದ ಚಳವಳಿಯಾಗಿ ರೂಪಿಸಿ, ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸಹಕರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಬಾಗಲಕೋಟೆ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಸೇರಿದಂತೆ ಆಯಾ ಗ್ರಾಪಂ ಕರ ವಸೂಲಾತಿಗಾರರು ಉಪಸ್ಥಿತರಿದ್ದರು.