ಸಾರಾಂಶ
ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಪಕ್ಷದವರೇ ಆದ ಬಸವನಗೌಡ ಪಾಟೀಲ್ ಯತ್ನಾಳ್ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದು ಪಕ್ಷದ ಹೈಕಮಾಂಡ್ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಿದೆ
ಕೋಲಾರ : ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಪಕ್ಷದವರೇ ಆದ ಬಸವನಗೌಡ ಪಾಟೀಲ್ ಯತ್ನಾಳ್ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದು ಪಕ್ಷದ ಹೈಕಮಾಂಡ್ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಮುಳಬಾಗಿಲು ತಾಲೂಕಿನ ಕುರುಡುಮಲೆ ಶ್ರೀ ವಿನಾಯಕ ದೇವಾಲಯದಲ್ಲಿ ಸುಮಾರು 50 ಜನ ಮಾಜಿ ಸಚಿವರು ಮತ್ತು ಶಾಸಕರು ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸ್ವಯಂ ಘೋಷಿತ ಹಿಂದೂ ಹುಲಿ
ಅನಂತ್‌ಕುಮಾರ್, ಶಿವಪ್ಪ, ಸದಾನಂದ ಗೌಡ, ರಾಮಚಂದ್ರಗೌಡ ಇವರೆಲ್ಲ ಸೇರಿ ಬಿಜೆಪಿ ಕಟ್ಟಿದ್ದಾರೆ. ಇವರ ವಿರುದ್ಧವೇ ಸ್ವಯಂ ಘೋಷಿತ ಹಿಂದು ಹುಲಿ ಎಂದು ಹೇಳಿಕೊಂಡಿರುವ ಯತ್ನಾಳ್ ಹಿಂದೆ ಕೇವಲ ೪-೫ ನಾಯಕರಿದ್ದಾರೆ, ಆದರೆ ಬಿ.ವೈ.ವಿಜಯೇಂದ್ರ ಹಿಂದೆ ಇಡೀ ರಾಜ್ಯದ ಬಿಜೆಪಿ ಶಾಸಕರು ಮಾಜಿ ಸಚಿವರು ನಾಯಕರು ಕಾರ್ಯಕರ್ತರು ಇದ್ದಾರೆಂದು ಹೇಳಿದರು.ಬಿಜೆಪಿ ಒಳಗೆ ಹಾಗೂ ಹೊರಗೆ ದುಷ್ಟ ಶಕ್ತಿಗಳ ಕೂಟ ರಚನೆಯಾಗಿದ್ದು ಇದಕ್ಕೆಲ್ಲ ನಾವು ಸೊಪ್ಪು ಹಾಕುವುದಿಲ್ಲ. ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿರೋದು ಸಹಜ. ಯಾಕೆಂದರೆ ಆಡಳಿತರೂಡ ಕಾಂಗ್ರೆಸ್ ಸರ್ಕಾರ ಇರೋದ್ರಿಂದ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಉಪಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆಂದು ನೆನಪಿಸಿದರು.
ಕೈ ಜತೆ ಯತ್ನಾಳ್ ಒಳ ಒಪ್ಪಂದ
ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಯತ್ನಾಳ್ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿ ವಿರುದ್ಧವೇ ಬಾಯಿ ಚಪಲ ಮಾಡುತ್ತಿದ್ದಾರೆ ಇವರ ಆಟ ನಡೆಯುವುದಿಲ್ಲ ಎಂದರಲ್ಲದೆ ದುಷ್ಟಶಕ್ತಿಗಳ ವಿರುದ್ಧ ನಾವು ಹೋರಾಟ ಮಾಡುತ್ತಿದ್ದು, ಮುಳಬಾಗಿನ ಶ್ರೀ ವಿನಾಯಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ, ರಾಜ್ಯದ ಜನತೆಗೆ ಎಲ್ಲಾ ರೀತಿಯಲ್ಲೂ ಒಳ್ಳೆಯದಾಗಲಿ, ಬಿಜೆಪಿ ಪಕ್ಷ ಉತ್ತಮ ರೀತಿಯಲ್ಲಿ ಸಂಘಟನೆಯಾಗಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಮಾತನಾಡಿ, ಸದಾನಂದ ಗೌಡರು ಮುಖ್ಯಮಂತ್ರಿಗಳಾಗಿ ಕೇಂದ್ರ ಸಚಿವರಾಗಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಅಂತವರ ವಿರುದ್ಧವೇ ಯತ್ನಾಳ್ ಮಾತನಾಡಿರುವುದು ಸರಿಯಲ್ಲ ಎಂದು ಆರೋಪಿಸಿದರಲ್ಲದೆ, ನಾವು ಅಂತಹ ಕೀಳು ಮಟ್ಟಕ್ಕೆ ಇಳಿಯುವುದಿಲ್ಲ, ೫೦ ಜನ ಮಾಜಿ ಸಚಿವರು ಮತ್ತು ಮಾಜಿ ಶಾಸಕರು ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಪರವಾಗಿ ನಿಂತಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರ ಅಧಿಕಾರ ಹಿಡಿಯಲಿದೆ ಎಂದು ತಿಳಿಸಿದರು.
ಯತ್ನಾಳ್ ಹುಲಿಯಲ್ಲ ಇಲಿ
ಯತ್ನಾಳ್ ಸ್ವಯಂ ಘೋಷಿತ ಹುಲಿಯಲ್ಲ ಇಲಿ ಎಂದು ಟೀಕಿಸಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ ಸೇರಿದಂತೆ ಹಲವಾರು ಹಗರಣಗಳಲ್ಲಿ ಮುಳುಗಿದ್ದು ಸರ್ಕಾರ ನಡೆಸುವುದಕ್ಕೆ ನೈತಿಕ ಹೊಣೆ ಕಳೆದುಕೊಂಡಿದೆ ಎಂದು ದೂರಿದರು.ಮಾಜಿ ಶಾಸಕರಾದ ವೈ.ವೈಸಂಪಂಗಿ, ದೇವನಹಳ್ಳಿ ಜಿ.ಚಂದ್ರಣ್ಣ, ಶಿಡ್ಲಘಟ್ಟ ಎಂ.ರಾಜಣ್ಣ ಬಂಗಾರ್ಪೇಟೆ ಎಂ.ನಾರಾಯಣಸ್ವಾಮಿ, ಬಿ.ಪಿ.ವೆಂಕಟಮುನಿಯಪ್ಪ, ಮುಖಂಡರಾದ ರೂಪಾಳಿ ನಾಯಕ್, ಪಿಳ್ಳ ಮುಂಸ್ವಾಮಿ, ಸುನಿಲ್, ಜಗದೀಶ್, ಸುರೇಶ್, ಬಸವರಾಜ್ ಕಿನಿರಾಮ, ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್, ಮಾವು ಮಂಡಳಿ ಮಾಜಿ ಅಧ್ಯಕ್ಷ ಮಲ್ಲನಾಯಕನಹಳ್ಳಿ ಎಂ.ಕೆ.ವಾಸದೇವ್ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಮೈಸೂರು ಸುರೇಶ್‌ರಾಜು, ನಗರ ಘಟಕ ಅಧ್ಯಕ್ಷ ಕಾಪರ್ತಿ ಅಮರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೋಳಿ ನಾಗರಾಜ್ ಇದ್ದರು.