ಸಾರಾಂಶ
ರಾಜ್ಯದಲ್ಲಿ ನೀಡಿರುವ 5 ಗ್ಯಾರಂಟಿ ಯೋಜನೆಗಳಿಂದ ಜನ ಸಾಮಾನ್ಯರನ್ನು ಸೋಂಬೇರಿಗಳನ್ನಾಗಿ ಕಾಂಗ್ರೇಸ್ ಸರ್ಕಾರ ಮಾಡಲು ಹೊರಟಿದ್ದಾರೆ. ಇದರಿಂದ ರಾಜ್ಯದ ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬೀಳುತ್ತದೆ,
ಕೋಲಾರ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿವೆ. ಕಾಂಗ್ರೆಸ್ ನಿಷ್ಠಾವಂತ ಮುಖಂಡರೇ ಬಹಿರಂಗವಾಗಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿ ಮತಯಾಚನೆ ಮಾಡುವ ಮೂಲಕ ಪಕ್ಷಕ್ಕೆ ಶಾಕ್ ನೀಡುತ್ತಿದ್ದಾರೆ.ಆ ಮೂಲಕ ಕಾಂಗ್ರೆಸ್‌ಗೆ ಒಳ ಏಟು ಜೋರಾಗಿಯೇ ಇದ್ದು ಅಭ್ಯರ್ಥಿ ಇನ್ನೂ ಕೆಲವೇ ಮುಖಂಡರನ್ನು ಆತುಕೊಂಡಿರುವುದು ಪಕ್ಷದ ನಿಷ್ಠಾವಂತರು ಹಾಗೂ ಪ್ರಮುಖರಲ್ಲಿ ಬೇಸರ ಮೂಡಿಸಿ ಬೇರೆ ಪಕ್ಷದತ್ತ ಮುಖ ಮಾಡುತ್ತಿದ್ದಾರೆ.ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ
ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕೋಲಾರ ತಾಲ್ಲೂಕಿನ ಹುತ್ತೂರು ಹೋಬಳಿಯ ಕಾಂಗ್ರೆಸ್ ಮುಖಂಡ ಹೊಳಲಿ ಪ್ರಕಾಶ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಲವು ಸ್ಥಾನಗಳನ್ನು ಅಲಂಕರಿಸಿ ಹೊಳಲಿ ಪ್ರಕಾಶ್ ಸೇವೆ ಸಲ್ಲಿಸಿದ್ದರು. ಆದರೆ ಪ್ರಸ್ತುತು ರಾಜಕೀಯ ಬೆಳವಣಿಗೆಯಲ್ಲಿ ಬಹಿರಂಗವಾಗಿಯೇ ಜೆಡಿಎಸ್ ಪರ ಪ್ರಚಾರ ನಡೆಸಿದ್ದಾರೆ.
ಪ್ರಚಾರದ ವೇಳೆ ಮಾತನಾಡಿದ ಅವರು, ದೇಶದ ಭದ್ರತೆ ಹಾಗೂ ಹಿಂದೂ ಸಮುದಾಯದ ಹೆಣ್ಣು ಮಕ್ಕಳ ಹಣೆಯಲ್ಲಿರುವ ಕುಂಕುಮ ಉಳಿಯಬೇಕಾದರೆ ದೇಶದವನ್ನು ವಿಶ್ವಗುರುವನ್ನಾಗಿಸಿದ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಮಂತ್ರಿಯಾಗಬೇಕು. ನಾನು ಹುಟ್ಟು ಕಾಂಗ್ರೇಸ್ ಪಕ್ಷದವನಾಗಿದ್ದು ಮೊದಲು ಇರುವ ಕಾಂಗ್ರೇಸ್ ಗೂ ಹೀಗಿರುವ ಕಾಂಗ್ರೇಸ್ ಗೂ ತುಂಬಾ ವ್ಯತ್ಯಾಸವಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನೀಡಿರುವ ೫ ಗ್ಯಾರಂಟಿ ಯೋಜನೆಗಳಿಂದ ಜನ ಸಾಮಾನ್ಯರನ್ನು ಸೋಂಬೇರಿಗಳನ್ನಾಗಿ ಕಾಂಗ್ರೇಸ್ ಸರ್ಕಾರ ಮಾಡಲು ಹೊರಟಿದ್ದಾರೆ. ಇದರಿಂದ ರಾಜ್ಯದ ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬೀಳುತ್ತದೆ, ಆಗಾಗಿ ಲೋಕಸಭಾ ಚುನಾವಣೆಗೆ ಎನ್.ಡಿ.ಎ ಅಭ್ಯರ್ಥಿ ಮಲ್ಲೇಶ್ ಬಾಬು ಅವರ ಪರವಾಗಿ ಚುನಾವಣೆ ಪ್ರಚಾರವನ್ನು ಆರಂಭಿಸಿದ್ದೇನೆ ಎಂದು ತಿಳಿಸಿದರು.ಈ ವೇಳೆ ಬಿಜೆಪಿ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಹೊಳಲಿ ಹೊಸೂರು ಮಂಜುನಾಥ್ ಗೌಡ, ಪಾರೇಹೊಸಹಳ್ಳಿ ರಮೇಶ್, ಕಾಳಹಸ್ತಿಪುರ ಅಂಬರೀಶ್, ವಡಗೂರು ರಾಮು, ಕೆಂಬೋಡಿ ನಾರಾಯಣಗೌಡ, ಬಿಜೆಪಿ ನಾರಾಯಣಸ್ವಾಮಿ ತಂಬಳ್ಳಿ ಮುನಿಯಪ್ಪ, ಬೆಳಗಾನಹಳ್ಳಿ ವೆಂಕಟಮನಿಯಪ್ಪ ಇದ್ದರು.