ಸಾರಾಂಶ
ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಕಾಂಗ್ರೆಸ್ ಸರಕಾರ ಇದೆ. ಹೈಕಮಾಂಡ್ ಕಾಪಾಡುವ, ಸಚಿವರು, ಶಾಸಕರು ಬೆನ್ನಿಗೆ ನಿಲ್ಲುವ ಭ್ರಮೆಯಿಂದ ಹೊರಕ್ಕೆ ಬನ್ನಿ. ಕಾನೂನನ್ನು ಎದುರಿಸಿ. ಪುಂಡಾಟಿಕೆ ಒಪ್ಪಲಾಗದು - ಸಿ.ಮುನಿರಾಜು
ಚಿಕ್ಕಬಳ್ಳಾಪುರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಆಗ್ರಹಿಸಿದರು.
ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿ ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆದ ಬಿಜೆಪಿ- ಜೆಡಿಎಸ್ ಶಾಸಕರ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಮೈಸೂರಿನ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣಗಳು ಇದರಲ್ಲಿ ಪ್ರಮುಖವಾಗಿವೆ. ಮುಡಾದಲ್ಲಿ ಸುಮಾರು 5 ಸಾವಿರ ಕೋಟಿ ಮೌಲ್ಯದ ನಿವೇಶನಗಳನ್ನು ನುಂಗಿ ಹಾಕಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ರಾಜೀನಾಮೆಗೆ ನೀಡಬೇಕೆಂದು ಆಗ್ರಹಿಸಿದರು.ಭ್ರಷ್ಟರಿಗೋಸ್ಕರ ಸರ್ಕಾರಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಕಾಂಗ್ರೆಸ್ ಸರಕಾರ ಇದೆ. ಹೈಕಮಾಂಡ್ ಕಾಪಾಡುವ, ಸಚಿವರು, ಶಾಸಕರು ಬೆನ್ನಿಗೆ ನಿಲ್ಲುವ ಭ್ರಮೆಯಿಂದ ಹೊರಕ್ಕೆ ಬನ್ನಿ. ಕಾನೂನನ್ನು ಎದುರಿಸಿ. ಪುಂಡಾಟಿಕೆ ಒಪ್ಪಲಾಗದು. ತಪ್ಪನ್ನು ಒಪ್ಪಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾನೂನು ಕ್ರಮ ಎದುರಿಸಿ ಎಂದು ಒತ್ತಾಯಿಸಿದರು. ಸಿಎಂ ರಾಜೀನಾಮೆ ಕೊಡುವವರೆಗೆ ಹೋರಾಟ ನಿಲ್ಲದು ಎಂದು ಹೇಳಿದರು.
ಮೇಲ್ನೋಟಕ್ಕೆ ದಾಖಲೆ ಲಭಿಸಿದರೆ ಸ್ವಯಂಪ್ರೇರಿತವಾಗಿ ತನಿಖೆಗೆ ಸೂಚನೆ ಕೊಡಲು ರಾಜ್ಯಪಾಲರಿಗೆ ಅಧಿಕಾರವಿದೆ. ನೋಟಿಸ್‌ಗೆ ಸಿದ್ದರಾಮಯ್ಯನವರು ಉತ್ತರ ಕೊಟ್ಟಿಲ್ಲ. ರಾಜ್ಯಪಾಲರು ಕಾನೂನಾತ್ಮಕವಾಗಿ ನಡೆದುಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯನವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಮುಡಾ ಹಗರಣ ಆಗಿದೆ ಎಂದಾಕ್ಷಣ ನಗರಾಭಿವೃದ್ಧಿ ಸಚಿವರು ಮೈಸೂರಿಗೆ ಧಾವಿಸಿ ಕಡತಗಳನ್ನು ಹೊತ್ತೊಯ್ದಿದ್ದಾರೆ. ಇದರ ಅರ್ಥ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಭ್ರಷ್ಟಾಚಾರ
ಶಾಸಕರು, ಸಚಿವರು, ಕಾರ್ಯಕರ್ತರು ಮುಖ್ಯಮಂತ್ರಿಯ ಜತೆಗಿದ್ದ ಮಾತ್ರಕ್ಕೆ ಅನ್ಯಾಯ ನ್ಯಾಯವಾಗುವುದಿಲ್ಲ. ದಾಖಲೆ ಸಹಿತ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಭ್ರಷ್ಟಾಚಾರದಲ್ಲಿ ಮುಳುಗೆದ್ದಿದೆ. ದಿಕ್ಕು ದೆಸೆಯಿಲ್ಲದೆ ಹುಚ್ಚು ಕುದುರೆಯಂತೆ ರಾಜ್ಯ ಸರ್ಕಾರ ನಡೆಯುತ್ತಿದೆ ಎಂದರು.
ಮುಖ್ಯಮಂತ್ರಿಗಳು ಬ್ಲ್ಯಾಕ್ ಮೇಲ್ ರಾಜಕಾರಣ ಬಿಟ್ಟು ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ತಪ್ಪೇ ಮಾಡಿಲ್ಲವೆಂದು ಸಾಬೀತಾದರೆ ಮತ್ತೆ ಮುಖ್ಯಮಂತ್ರಿ ಆಗಬಹುದು. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಹಲವಾರು ಹಗರಣಗಳು ನಡೆದಿವೆ. ಇದು ಹಗರಣವೋ ಹಗರಣಗಳ ಸರ್ಕಾರ. ಮುಖ್ಯಮಂತ್ರಿ ರಾಜೀನಾಮೆ ಕೊಡುವವರೆಗೆ ಎನ್‌ಡಿಎ ಅಂಗಪಕ್ಷಗಳಾದ ನಾವು ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.
ಸಾವಿರಾರು ಕೋಟಿ ಲೂಟಿ
ಬಿಜೆಪಿ ಜಿಲ್ಲಾಧ್ಯಕ್ಷ ಡಿ.ವಿ.ರಾಮಲಿಂಗಪ್ಪ ಮಾತನಾಡಿ, ಮುಡಾ ಹಗರಣದಲ್ಲಿ ಸಾವಿರಾರು ಕೋಟಿ ಲೂಟಿ ಆಗಿದೆ. ವಾಲ್ಮೀಕಿ ನಿಗಮದಲ್ಲೂ 187 ಕೋಟಿ ರು.ಗಳ ಹಗರಣ ಆಗಿದೆ. ಸಿದ್ದರಾಮಯ್ಯನವರು ಕುರ್ಚಿ ಬಿಡಬೇಕೆಂದು ಜನರು ಬಯಸುತ್ತಿದ್ದಾರೆ ಎಂದು ತಿಳಿಸಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಮಾತನಾಡಿ, ಲೂಟಿಕೋರ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕು. ಅದು ಬಿಟ್ಟು ಕೇಂದ್ರ ಸಚಿವ ಕುಮಾರಸ್ವಾಮಿಯವರ ಮೇಲೆ ಆರೋಪ ಮಾಡುವುದು ಸರಿಯಲ್ಲಾ ಎಂದು ಟೀಕಿಸಿದರು.
ರಾಜ್ಯಪಾಲರ ಆಡಳಿತ ಜಾರಿ ಮಾಡಿ
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹೋರಾಟ ಮಾಡಲು ಮುಂದಾದ ಕಾಂಗ್ರೆಸ್ ನಿಂದ ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತಿದೆ. ಕಾಂಗ್ರೆಸ್ಸಿಗರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ. ಕೂಡಲೇ ರಾಜ್ಯಪಾಲರ ಆಡಳಿತ ಜಾರಿಗೊಳಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಮುಖಂಡರಾದ ಮರಳ ಕುಂಟೆ ಕೃಷ್ಣಮೂರ್ತಿ, ಎ.ವಿ.ಬೈರೇಗೌಡ,ಮುರಳೀಧರ್,ಅಶೋಕ್ ಕುಮಾರ್, ಎಸ್ ಆರ್ ಎಸ್ ದೇವರಾಜ್, ಅನು ಆನಂದ್, ಸಂತೋಷ್, ಕೃಷ್ಣ ಮೂರ್ತಿ, ರಾಮಣ್ಣ, ಗುಪ್ತ, ಮುಸ್ಟೂರು ಶಶಿ ಕುಮಾರ್, ಲಕ್ಷ್ಮೀಪತಿ, ಮಧುಚಂದ್ರ, ಬಾಲು, ಕೊಳವನಹಳ್ಳಿ ಮುನಿರಾಜು,ಮಂಜುನಾಥ್,ಮತ್ತಿತರರು ಇದ್ದರು.