ಸಾರಾಂಶ
ಕೋಲಾರ : ಜಿಲ್ಲೆಯ ಪ್ರತಿಯೊಂದು ಸೊಸೈಟಿಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳೇ ಹೆಚ್ಚಾಗಿ ಆಯ್ಕೆಯಾಗುವ ಮೂಲಕ, ಡಿಸಿಸಿ ಬ್ಯಾಂಕ್‌ಗೆ ಎರಡು ಪಕ್ಷಗಳ ಒಬ್ಬರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ತಾಲೂಕು ಕಾರ್ಯಕಾರಿಣಿ ಮತ್ತು ಬಿಜೆಪಿ ಸದಸ್ಯತ್ವ ಅಭಿಯಾನ ಸಭೆಯಲ್ಲಿ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಹೈಕಮಾಂಡ್ ಮಾರ್ಗದರ್ಶನದಂತೆ ಕಾರ್ಯಕರ್ತರು ಮುಂದೆ ನಡೆಯೋಣ ಎಂದರು.
ಈ ನಿಟ್ಟಿನಲ್ಲಿ ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಗಳಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ನಿಂತು ಗೆಲ್ಲಿಸಿಕೊಳ್ಳುವ ಮೂಲಕ ಮೈತ್ರಿ ಪಕ್ಷದ ಶಕ್ತಿಯಾಗೋಣ ಎಂದರು.ವಾರದ ಪ್ರತಿ ಬುಧವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರತಿಯೊಂದು ಗ್ರಾಪಂ ವಾರು ಸಭೆ ನಡೆಸಿ ಪಕ್ಷ ಸದೃಢವಾಗಿ ಬಲಿಷ್ಠವಾಗುವಂತ ಕೆಲಸವನ್ನು ಮಾಡೋಣ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಪ್ರತಿಯೊಬ್ಬರೂ ಸಹ ಬಿಜೆಪಿ ಪಕ್ಷದ ಸದಸ್ಯತ್ವ ಸಂಖ್ಯೆ ೮೮೦೦೦೦೨೦೨೪ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಪಕ್ಷದ ಸದಸ್ಯತ್ವವನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಜಿಪಂ ಮಾಜಿ ಸದಸ್ಯ ಅರುಣ್ ಕುಮಾರ್, ಕೆಯುಡಿಎ ಮಾಜಿ ಅಧ್ಯಕ್ಷ ವಿಜಯಕುಮಾರ್, ತಾಪಂ ಮಾಜಿ ಅಧ್ಯಕ್ಷ ಸೂಲೂರು ಆಂಜಿನಪ್ಪ, ಬಿಜೆಪಿ ಮಾಧ್ಯಮ ಜಿಲ್ಲಾ ಸಂಚಾಲಕ ಎನ್ ಎಸ್ ಪ್ರವೀಣ್ ಗೌಡ, ಬಂಕ್ ಮಂಜು, ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ವಿಜಯ್ ಕುಮಾರ್, ಬೆಗ್ಲಿ ಸೂರ್ಯ ಪ್ರಕಾಶ್, ಸಾ.ಮಾ.ಅನಿಲ್, ಸವಿತಾ ಶ್ರೀನಾಥ್ ಇದ್ದರು.