ಮೋದಿ ಆಡಳಿತದಿಂದ ಜಗತ್ತಿನ ದೃಷ್ಟಿಯಲ್ಲಿ ಭಾರತದ ಸ್ಥಾನಮಾನ ಹೆಚ್ಚಳ: ಸೀಕಲ್ ರಾಮಚಂದ್ರಗೌಡ

| Published : Sep 17 2024, 12:52 AM IST / Updated: Sep 17 2024, 04:22 AM IST

ಸಾರಾಂಶ

ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಅವರು ಮೋದಿ ಆಡಳಿತದಿಂದ ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ ಎಂದು ಹೇಳಿದರು. ಸಾಮಾನ್ಯ ಕಾರ್ಯಕರ್ತರು ಸಹ ಪಕ್ಷದ ಉನ್ನತ ಹುದ್ದೆಗಳನ್ನು ಅಲಂಕರಿಸಬಲ್ಲರು ಮತ್ತು ಸಂವಿಧಾನಬದ್ಧ ಹುದ್ದೆಗಳನ್ನು ಅಲಂಕರಿಸಬಲ್ಲರು ಎಂದು ಅವರು ಹೇಳಿದರು.

 ಶಿಡ್ಲಘಟ್ಟ : ಮೋದಿ ಆಡಳಿತದಿಂದ ಭಾರತವನ್ನು ಜಗತ್ತು ನೋಡುವ ದೃಷ್ಟಿಕೋನವೇ ಬದಲಾಗಿದೆ ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ತಿಳಿಸಿದರು.ತಾಲೂಕಿನ ಕೊತ್ತನೂರು ಗ್ರಾಮದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಮನೆ ಮನೆಗೂ ಭೇಟಿ ನೀಡಿ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು. 

ಜಾತಿ ಧರ್ಮ ಬಡತನ ಸಿರಿತನದ ತಾರತಮ್ಯ ಇಲ್ಲದೆ ಎಲ್ಲರನ್ನೂ ಸಮಾನತೆಯಿಂದ ನೋಡುವ ಪಕ್ಷ ಬಿಜೆಪಿ ಮಾತ್ರ ಎಂದರು.ಇಲ್ಲಿ ಸಾಮಾನ್ಯ ಕಾರ್ಯಕರ್ತನು ಕೂಡ ಪಕ್ಷದ ಉನ್ನತ ಸ್ಥಾನವನ್ನು ಅಲಂಕರಿಸಬಲ್ಲ, ಸಂವಿಧಾನ ಬದ್ದ ಹುದ್ದೆಯಲ್ಲೂ ಕೂರ ಬಲ್ಲ. ಅಷ್ಟರ ಮಟ್ಟಿಗೆ ಕಾರ್ಯಕರ್ತರ ಮತ್ತು ಜನಪರ ಕಾಳಜಿಯುಳ್ಳ ಪಕ್ಷ ಬಿಜೆಪಿಯಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ನೋಂದಾಯಿಸಿಕೊಳ್ಳಿ ಎಂದು ಮನವಿ ಮಾಡಿದರು.

ಪ್ರಧಾನ ಮಂತ್ರಿ ಮೋದಿ ಮತ್ತು ಪಕ್ಷದ ಅಭಿವೃದ್ದಿ ಕಾರ್ಯಗಳು, ಜನಪರ ಯೋಜನೆಗಳ ಬಗ್ಗೆ ಜನ ಸಾಮಾನ್ಯರಿಗೆ ಮನವರಿಕೆ ಮಾಡಿಕೊಟ್ಟು ಹೆಚ್ಚು ಮಂದಿ ಪಕ್ಷದಲ್ಲಿ ಸದಸ್ಯತ್ವವನ್ನು ನೋಂದಾಯಿಸಿಕೊಳ್ಳುವಂತೆ ಮಾಡುವ ಕೆಲಸವನ್ನು ಪಕ್ಷದ ನಾವೆಲ್ಲರೂ ಸೇರಿ ಮಾಡಲಿದ್ದೇವೆ.ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸದಸ್ಯತ್ವವನ್ನು ಮಾಡಿಸುವ ಗುರಿ ಹಾಕಿಕೊಂಡಿದ್ದು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿದ್ದೇವೆ. 

ಪಕ್ಷದಿಂದ ಆಗುತ್ತಿರುವ ಅಭಿವೃದ್ದಿ, ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಪಕ್ಷದಲ್ಲಿ ಸದಸ್ಯತ್ವವನ್ನು ನೋಂದಾಯಿಸಿಕೊಳ್ಳಲು ಮುಂದೆ ಬರುತ್ತಿರುವವರ ಸಂಖ್ಯೆಯೂ ನಿರೀಕ್ಷೆಗೂ ಮೀರಿ ಹೆಚ್ಚು ಇದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.ಗ್ರಾಮದ ಮನೆ ಮನೆಗೂ ಭೇಟಿ ನೀಡಿ ಸದಸ್ಯತ್ವವನ್ನು ನೋಂದಾಯಿಸಿ ಗುರ್ತಿನ ಚೀಟಿಯನ್ನು ವಿತರಿಸಲಾಯಿತು.

 ವಿಧಾನಪರಿಷತ್ ಸದಸ್ಯ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನದ ಬೆಂಗಳೂರು ಗ್ರಾಮಾಂತರ ಪ್ರಭಾರಿ ಕೇಶವಪ್ರಸಾದ್, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಅಶ್ವಿನಿಶಂಕರ್, ಜಿಲ್ಲಾಧ್ಯಕ್ಷ ಆಂಜನೇಯಗೌಡ, ಪ್ರಧಾನ ಕಾರ್ಯದರ್ಶಿ ಮುರಳಿ, ಗ್ರಾಮಾಂತರ ಅಧ್ಯಕ್ಷ ಸೀಕಲ್ ಆನಂದಗೌಡ, ಸುರೇಂದ್ರಗೌಡ, ನರೇಶ್, ಕನಕ ಪ್ರಸಾದ್ ಇನ್ನಿತರೆ ಮುಖಂಡರು ಹಾಜರಿದ್ದರು.