ಸಾರಾಂಶ
ಕೋಲಾರ : ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಹಿಂದೆಂದು ಕಾಣದಂತ ಪರಿಶಿಷ್ಟರ ಪಾಲಿನ ಅನುದಾನ ಲೂಟಿ, ಹಗಲು ದರೋಡೆಗಳಾಗಿದ್ದು, ಇದನ್ನು ವಿರೋಧಿಸಿ ಜು.22 ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ವಾಲ್ಮೀಕಿ ಸ್ವಾಭಿಮಾನಿ ಸಂಘದಿಂದ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಂಡಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಚಳವಳಿ ರಾಜಣ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹಗರಣದ ಸಂಬಂಧವಾಗಿ ತನಿಖೆ ಮುಗಿಸಿ ಆರೋಪಿಗಳನ್ನು ಜೈಲಿಗೆ ಕಳುಹಿಸ ಬೇಕಾಗಿತ್ತು. ಆದರೆ ಬೇಲಿಯೇ ಎದ್ದು ಹೊಲ ಮೇಯ್ದೆದಿರುವ ಹಿನ್ನೆಲೆಯಲ್ಲಿ ತನಿಖೆ ಆಮೆ ವೇಗದಲ್ಲಿ ಸಾಗುತ್ತಿದೆ ಎಂದು ಟೀಕಿಸಿದರು. ಬಜೆಟ್‌ನಲ್ಲಿ ₹೧೮೭ ಕೋಟಿ ನೀಡಿ
ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿನ ೧೮೭ ಕೋಟಿ ರೂ ಹಗರಣದಲ್ಲಿ ಈಗಾಗಲೇ ೯೪.೭೩ ಕೋಟಿ ರೂ ನಿಗಮಕ್ಕೆ ವರ್ಗಾವಣೆ ಮಾಡಲಾಗಿದ್ದು, ಉಳಿದ ಹಣ ೯೨,೨೭ ಕೋಟಿ ರೂ ಮೊತ್ತದ ಕುರಿತು ತನಿಖೆ ಹಂತದಲ್ಲಿದೆ. ಪ್ರಸ್ತುತ ಬಜೆಟ್‌ನಲ್ಲಿ ೧೮೭ ಕೋಟಿ ರೂ.ಗಳನ್ನು ನಿಗಮಕ್ಕೆ ಬಿಡುಗಡೆ ಮಾಡಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಪರಿಶಿಷ್ಟ ಪಂಗಡದ ಸಮುದಾಯದಲ್ಲಿ ಸುಮಾರು ಶೇ.೭೫ ರಿಂದ ೮೦ ರಷ್ಟು ಕಡುಬಡವರು ಇರುವುದು ಇವರಿಗೆ ಪೂರಕವಾದ ಯೋಜನೆಗಳನ್ನು ನಿಗಮದಲ್ಲಿ ರೂಪಿಸಿಲ್ಲ, ಬೇರೆ ಬೇರೆ ಇಲಾಖೆಗಳಲ್ಲಿ ಮೀಸಲಾತಿ ಅನುದಾನಗಳನ್ನು ಕೂಡಲೇ ಬಿಡುಗಡೆ ಮಾಡಿ ಕಾರ್ಯಕ್ರಮ ರೂಪಿಸಬೇಕು ಎಂದರು.
ಜಿಲ್ಲೆಯ ವಾಲ್ಮೀಕಿ ಸಂಘಟನೆಯ ಮುಖಂಡ ನರಸಿಂಹಯ್ಯ, ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ನಾಯಕ್, ಜಿಲ್ಲಾಧ್ಯಕ್ಷ ಎಂ.ಎನ್.ನಾಗರಾಜ್, ಮುಖಂಡರಾದ ವೆಂಕಟೇಶ್, ಶ್ಯಾಮ್ ನಾಯಕ್, ಬಾಬು, ನಾರಾಯಣಸ್ವಾಮಿ, ನಾಯಕ್ ಇದ್ದರು.