ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದ ವಕ್ಫ್ ಆಸ್ತಿ ವಿವಾದ: ಹೈಕೋರ್ಟ್ ತೀರ್ಪು ಆಧರಿಸಿ ಸೂಕ್ತ ಕ್ರಮ

| Published : Nov 17 2024, 01:16 AM IST / Updated: Nov 17 2024, 04:46 AM IST

ಸಾರಾಂಶ

ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದ ವಿವಾದಿತ ವಕ್ಫ್‌ ಆಸ್ತಿಯಲ್ಲಿ ಶುಕ್ರವಾರ ಉಳುಮೆ ಮಾಡಲು ಮುಂದಾದ ರೈತರ ಮೇಲೆಯೇ ಪೋಲಿಸರು ಪ್ರಕರಣ ದಾಖಲಿಸಿ ಟ್ರ್ಯಾಕ್ಟರ್‌ ವಶಪಡಿಸಿಕೊಂಡಿದ್ದ ಪ್ರಕರಣ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ರವೀಂದ್ರ ಯಥಾಸ್ಥಿತಿ ಕಾಪಾಡುವಂತೆ ಮನವಿ ಮಾಡಿದ್ದಾರೆ

 ಚಿಕ್ಕಬಳ್ಳಾಪುರ : ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಂಬಾಜಿ ದುರ್ಗಾ ಹೋಬಳಿಯ ತಿಮ್ಮಸಂದ್ರ ಗ್ರಾಮದ ಸರ್ವೆ ನಂ 13/1, 13/2 ಮತ್ತು 13/3 ಸರ್ವೆ ನಂಬರ್ ಗಳ ಜಮೀನು ವಿವಾದವು ಹೈಕೋರ್ಟ್‌ನಲ್ಲಿ ತೀರ್ಪಿಗೆ ಬಾಕಿ ಇರುವ ಕಾರಣ ಪಾರ್ಟಿದಾರರು ಮತ್ತು ಎದುರುದಾರರನ್ನು ಕರೆದು ಶಾಂತಿ ಸಭೆಯನ್ನು ಮಾಡಲಾಗಿದೆ. 

ಹೈಕೋರ್ಟ್ ತೀರ್ಪನ್ನು ಆಧರಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡಿಕೊಂಡು ಶಾಂತಿ ಸುವ್ಯವಸ್ಥೆಗೆ ಯಾರು ಭಂಗವಾಗದಂತೆ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮನವಿ ಮಾಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿನ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮಹನೀಯರ ಪುತ್ಥಳಿಗಳನ್ನು ನಿರ್ಮಿಸಲು ಹಾಗೂ ನಾಮಫಲಕಗಳನ್ನು ಹಾಕಲು ಸರ್ಕಾರದ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ನಿಯಮಬಾಹಿರ ನಾಮಫಲಕ

ಜಿಲ್ಲೆಯ ಕೆಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ದೇಶ ಸೇವೆಗೆ ಶ್ರಮಿಸಿದ ಮಹನೀಯರ ನಾಮಫಲಕಗಳನ್ನು ಹಾಗೂ ಪುತ್ಥಳಿಗಳನ್ನು ನಿಯಮರಹಿತವಾಗಿ ಹಾಕುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಈ ರೀತಿಯ ಕಾನೂನು ಬಾಹಿರವಾಗಿ ಪುತ್ಥಳಿ ನಿರ್ಮಿಸಿ, ನಾಮಫಲಕ ಹಾಕಿ ಸಾರ್ವಜನಿಕ ಶಾಂತಿ ಭಂಗ ಉಂಟಾಗುವ ರೀತಿ ಯಾವುದೇ ವ್ಯಕ್ತಿಗಳು ನಡೆದು ಕೊಳ್ಳಬಾರದು ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರತಿಯೊಬ್ಬರು ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು ಎಂದರು.

ಘಟನೆಯ ಹಿನ್ನಲೆ:

ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದ ವಿವಾದಿತ ವಕ್ಫ್‌ ಆಸ್ತಿಯಲ್ಲಿ ಶುಕ್ರವಾರ ಉಳುಮೆ ಮಾಡಲು ಮುಂದಾದ ರೈತರ ಮೇಲೆಯೇ ಪೋಲಿಸರು ಪ್ರಕರಣ ದಾಖಲಿಸಿ ಟ್ರ್ಯಾಕ್ಟರ್‌ ವಶಪಡಿಸಿಕೊಂಡಿದ್ದರು.

ತಿಮ್ಮಸಂದ್ರ ಗ್ರಾಮದ ಸರ್ವೆ ನಂಬರ್ 13-1 ರಲ್ಲಿ 2 ಎಕೆರೆ 21 ಗುಂಟೆ, 13-3 ರಲ್ಲಿ 20 ಗುಂಟೆ, ಸರ್ವೆ ನಂಬರ್ 20 ರಲ್ಲಿ 1 ಎಕೆರೆ 36 ಗುಂಟೆ ಜಮೀನನ್ನ ಹತ್ತಕ್ಕೂ ಹೆಚ್ಚು ಮಂದಿ ರೈತರು ಉಳುಮೆ ಮಾಡುತ್ತಿದ್ದರು ಎನ್ನಲಾಗಿದ್ದು ಈ ಜಮೀನುಗಳನ್ನ 2018-19 ರಲ್ಲಿ ವಕ್ಫ್‌ ಆಸ್ತಿಯಾಗಿ ಬದಲಾವಣೆ ಮಾಡಲಾಗಿದ್ದು,

ವಕ್ಫ್‌- ರೈತರ ನಡುವೆ ವಿವಾದ

ಈ ಜಾಗಕ್ಕೆ ವಕ್ಫ್‌ ಆಸ್ತಿ ಅಂತ ಕಾಂಪೌಂಡ್ ಸಹಾ ಹಾಕಿಕೊಳ್ಳಲಾಗಿದೆ. ಆದರೆ ಈಗ ವಿವಾದಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರೈತರು ಈ ಜಮೀನು ನಮ್ಮದು ಅಂತ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಲು ಮುಂದಾಗಿದ್ದಾರೆ. ಇದರಿಂದ ಚಿಂತಾಮಣಿ ಜಾಮೀಯಾ ಮಸೀದಿ ಟ್ರಸ್ಟ್ ನವರು ಹಾಗೂ ರೈತರ ನಡುವೆ ವಾಗ್ವಾದ ನಡೆದು ಗಲಾಟೆಯಾಗಿ, ವಿಷಯ ತಿಳಿದು ಚಿಂತಾಮಣಿ ಗ್ರಾಮಾಂತರವ ಪೊಲೀಸರು ಎರಡು ಕಡೆಯವರನ್ನ ಸಮಾಧಾನಪಡಿಸಿ ಠಾಣೆಗೆ ಕೆರೆಸಿ ಶಾಂತಿ ಸಭೆ ನಡೆಸಿದ್ದರು.

ನಂತರ ಜಾಮೀಯಾ ಮಸೀದಿ ಟ್ರಸ್ಟ್‌ನ ಕಾರ್ಯದರ್ಶಿ ಇನಾಯತ್ ಉಲ್ಲಾ ನೀಡಿದ ದೂರಿನ ಮೇರೆಗೆ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಅತಿಕ್ರಮ ಪ್ರವೇಶ ಪ್ರಕರಣ ದಾಖಲಿಸಿ 10ಕ್ಕೂ ಹೆಚ್ಚು ಮಂದಿ ರೈತರ ಮೇಲೆ ಬಿಎನ್‍ಎಸ್ 324(4) ಹಾಗೂ 329(3) ಅಡಿ ದೂರು ದಾಖಲಿಸಿದ್ದರು. ದೂರಿನನ್ವಯ ಉಳುಮೆ ಮಾಡಲು ತಂದಿದ್ದ ಟ್ರ್ಯಾಕ್ಟರ್‌ ಸಹ ವಶಕ್ಕೆ ಪಡೆದುಕೊಂಡಿದ್ದರು ಎಂದು ‘ಕನ್ನಡಪ್ರಭ’ದ ಮುಖಪುಟದಲ್ಲಿ ಶನಿವಾರ ಸುದ್ದಿ ವರದಿಯಾಗಿತ್ತು.

ಪತ್ರಿಕಾಗೋಷ್ಠಿಯಲ್ಲಿ ಉಪ ವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಚಿಂತಾಮಣಿ ತಹಸಿಲ್ದಾರ್ ಸುದರ್ಶನ್ ಯಾದವ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಜುಂಜಣ್ಣ, ವಾರ್ತಾ ಸಹಾಯಕ ಎಂ.ಆರ್. ಮಂಜುನಾಥ ಮತ್ತಿತರರು ಇದ್ದರು.