ಸಾರಾಂಶ
‘ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ ಕೋಟ್ಯಂತರ ರು. ಆಫರ್ ನೀಡಿರುವ ವಿಚಾರ ಹೊಸದಲ್ಲ. ಆಪರೇಷನ್ ಕಮಲ ಮಾಡುವುದೇ ಬಿಜೆಪಿಯ ಮಾಡೆಲ್. ಇದು ಕರ್ನಾಟಕದಲ್ಲೇ ಮೂರು ಬಾರಿ ಸಾಬೀತಾಗಿದ್ದು, ಮತ್ತೊಮ್ಮೆ ವಿಫಲ ಯತ್ನ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಸಚಿವರು ಆರೋಪಿಸಿದ್ದಾರೆ.
ಬೆಂಗಳೂರು : ‘ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ ಕೋಟ್ಯಂತರ ರು. ಆಫರ್ ನೀಡಿರುವ ವಿಚಾರ ಹೊಸದಲ್ಲ. ಆಪರೇಷನ್ ಕಮಲ ಮಾಡುವುದೇ ಬಿಜೆಪಿಯ ಮಾಡೆಲ್. ಇದು ಕರ್ನಾಟಕದಲ್ಲೇ ಮೂರು ಬಾರಿ ಸಾಬೀತಾಗಿದ್ದು, ಮತ್ತೊಮ್ಮೆ ವಿಫಲ ಯತ್ನ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಸಚಿವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿಯವರು ಕೆಲ ಶಾಸಕರಿಗೆ 100 ಕೋಟಿ ರು. ಆಫರ್ ನೀಡಿದ್ದಾರೆ ಎಂಬ ಶಾಸಕ ರವಿ ಗಣಿಗ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಎಚ್.ಸಿ.ಮಹದೇವಪ್ಪ ಹಾಗೂ ಈಶ್ವರ್ ಖಂಡ್ರೆ ಅವರು ಗಣಿಗ ಹೇಳಿಕೆಯನ್ನು ಸಮರ್ಥಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಮಾತನಾಡಿ, ಕರ್ನಾಟಕದಲ್ಲೇ ಬಿಜೆಪಿಯ ಆಪರೇಷನ್ ಕಮಲ ಪ್ರಾರಂಭವಾಗಿದ್ದು. ಬಳಿಕ ಇದನ್ನು ದೇಶದ ಬೇರೆ ರಾಜ್ಯಗಳಿಗೆ ತೆಗೆದುಕೊಂಡು ಹೋದರು. ಮಹಾರಾಷ್ಟ್ರದಲ್ಲಿ ಖುದ್ದು ಉದ್ಯಮಿ ಅದಾನಿ ಜತೆ ಸೇರಿ ಸರ್ಕಾರ ಬೀಳಿಸಿದರು. ಇದೇ ಬಿಜೆಪಿಯವರ ಮಾಡೆಲ್ ಎಂದು ಕಿಡಿ ಕಾರಿದರು.
ಬಿಜೆಪಿ ಸಂಘಟನಾತ್ಮಕವಾಗಿ ಕುಗ್ಗಿರುವ ರಾಜ್ಯಗಳಲ್ಲಿ ಇಡಿ, ಐಟಿ ಬಳಕೆಯಾಗುತ್ತಿದೆ. ಉಳಿದ ಕಡೆ ರಾಜ್ಯಪಾಲರ ದುರುಪಯೋಗ ಮಾಡುತ್ತಾರೆ. ಆಪರೇಷನ್ ಕಮಲ ಮಾಡುತ್ತಿರುವುದಕ್ಕೆ ಸಾಕ್ಷಿ ಇದೆ. ನಮ್ಮ ಪಕ್ಷದ ಶಾಸಕ ಸ್ನೇಹಿತರನ್ನು ಸಂಪರ್ಕ ಮಾಡಿದ್ದಾರೆ. ಅದನ್ನು ನಮ್ಮ ಸ್ನೇಹಿತರು ನಮಗೆ ಹೇಳಿದ್ದಾರೆ. ಆದರೆ, ಅದು ಕಾರ್ಯಗತ ಆಗುವುದಿಲ್ಲ. ಬಿಜೆಪಿ ನಾಯಕರು ಸರ್ಕಾರ ಬಿಳಿಸಲು ಸಾವಿರ ಕೋಟಿ ರೆಡಿ ಇದೆ ಅಂತಾರೆ. ಹಾಗಾದರೆ ಈ ಹಣ ಎಲ್ಲಿಂದ ಬಂತು ಎಂದು ಕಿಡಿ ಕಾರಿದರು.
ಆಪರೇಷನ್ ರುಚಿ ನೋಡಿದ್ದಾರೆ:
ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವುದು ಬಿಜೆಪಿಯವರಿಗೆ ವಾಡಿಕೆ ಆಗಿಬಿಟ್ಟಿದೆ. ಹಲವು ಬಾರಿ ಬಿಜೆಪಿಯವರು ರುಚಿ ನೋಡಿದ್ದಾರೆ. 2006-07ರಲ್ಲಿ ಇದನ್ನೇ ಮಾಡಿದ್ದರು. ಬಳಿಕ 2013ರಲ್ಲಿ ಹಾಗೂ 2019ರಲ್ಲೂ ಇದನ್ನೇ ಮಾಡಿದರು. ಇದೀಗ ಮತ್ತೆ ಹಳೆ ಚಾಳಿ ಮುಂದುವರೆಸಿದ್ದಾರೆ. ಬಿಜೆಪಿಯವರು ಕೋಟ್ಯಂತರ ರು. ಹಣದ ಆಫರ್ ಕೊಡುವುದರಲ್ಲಿ ಅನುಮಾನವೇ ಬೇಡ ಎಂದಿದ್ದಾರೆ.
ಆಪರೇಷನ್ ಯತ್ನ ನಿಜ:
ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಆಪರೇಷನ್ ಕಮಲ ಆಗಿದ್ದೇ ರಾಜ್ಯದಲ್ಲಿ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯವರು ಇಷ್ಟು ವರ್ಷದಲ್ಲಿ ಎಂದಾದರೂ ಸ್ವಂತ ಬಲದಿಂದ ಸರ್ಕಾರ ರಚನೆ ಮಾಡಿದ್ದಾರಾ? ಎಲ್ಲಾ ರಾಜ್ಯಗಳಲ್ಲೂ ಪ್ರತಿಪಕ್ಷಗಳ ಸರ್ಕಾರಗಳನ್ನು ಕೆಡವಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ. ಅಷ್ಟೇಕೆ 17 ಜನ ಶಾಸಕರ ತಂಡವನ್ನು ಬಾಂಬೆಗೆ ತೆಗೆದುಕೊಂಡು ಹೋಗಿ ಕಳೆದ ಸರ್ಕಾರವನ್ನು ಬೀಳಿಸಲಿಲ್ಲವೇ? ಇದಕ್ಕಿಂತ ಜಾಸ್ತಿ ಪುರಾವೆ ಬೇಕೆ? ಎಂದು ಪ್ರಶ್ನಿಸಿದರು.