ಬಿಜೆಪಿ 3 ಸೀಟಿಗೆ 15 ಹೆಸರುಗಳು ದೆಹಲಿಗೆ

| Published : May 25 2024, 12:53 AM IST / Updated: May 25 2024, 04:19 AM IST

ಸಾರಾಂಶ

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಲಭ್ಯವಾಗುವ ಮೂರು ಸ್ಥಾನಗಳಿಗೆ ರಾಜ್ಯ ಬಿಜೆಪಿ ವತಿಯಿಂದ ಸುಮಾರು 15 ಹೆಸರುಗಳನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿದು ಬಂದಿದೆ.

 ಬೆಂಗಳೂರು :  ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಲಭ್ಯವಾಗುವ ಮೂರು ಸ್ಥಾನಗಳಿಗೆ ರಾಜ್ಯ ಬಿಜೆಪಿ ವತಿಯಿಂದ ಸುಮಾರು 15 ಹೆಸರುಗಳನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಬುಧವಾರ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಸುಮಾರು 44 ಮಂದಿ ಆಕಾಂಕ್ಷಿಗಳ ಬಗ್ಗೆ ಚರ್ಚೆಯಾಗಿತ್ತು. ಈ ಪೈಕಿ ಪಟ್ಟಿಯನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೆ ಕಳುಹಿಸುವ ಜವಾಬ್ದಾರಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಅವರಿಗೆ ನೀಡಲಾಗಿತ್ತು. 

ಜತೆಗೆ ಟಿಕೆಟ್ ಕೋರಿ ಬಂದಿರುವ ಆಕಾಂಕ್ಷಿಗಳ ಹೆಸರುಗಳ ಜತೆಗೆ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ, ರಾಜಕೀಯ ಪ್ರಾತಿನಿಧ್ಯ ಸಿಗದ ಸಣ್ಣ ಸಮುದಾಯಗಳ ಮುಖಂಡರ ಹೆಸರುಗಳನ್ನೂ ಸೇರಿಸಿ ಶಿಫಾರಸು ಮಾಡುವಂತೆ ಕೋರ್ ಕಮಿಟಿ ನಿರ್ಣಯ ಕೈಗೊಂಡಿತ್ತು.ಆ ಪ್ರಕಾರ ವಿಜಯೇಂದ್ರ ಮತ್ತು ರಾಜೇಶ್ ಅವರು ಚರ್ಚಿಸಿ ಒಂದೊಂದು ಕ್ಷೇತ್ರಕ್ಕೆ ಐದರಂತೆ ಸುಮಾರು ಹದಿನೈದು ಮಂದಿಯ ಹೆಸರುಗಳ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್‌ಗೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಘಟಕದಿಂದ ಹಲವು ಹೆಸರುಗಳು ಶಿಫಾರಸುಗೊಂಡಿದ್ದರೂ ಆ ಪಟ್ಟಿಯಲ್ಲಿ ಹೆಸರುಗಳನ್ನೇ ವರಿಷ್ಠರು ಆಯ್ಕೆ ಮಾಡಬಹುದು ಎಂದೇನಿಲ್ಲ. ಅವುಗಳನ್ನು ಬಿಟ್ಟು ಬೇರೆ ಅಚ್ಚರಿಯ ಹೆಸರುಗಳನ್ನು ಸೇರಿಸುವ ಸಂಭವವೂ ಇದೆ. ಹಿಂದೆ ಹಲವು ಬಾರಿ ಈ ರೀತಿ ನಡೆದಿದೆ.

ಮೂರರಲ್ಲಿ ಎರಡು ಸ್ಥಾನ ಒಬಿಸಿಗೆ?

ಒಟ್ಟು ಮೂರು ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಇತರ ಹಿಂದುಳಿದ ವರ್ಗಗಳಿಗೆ ಹಾಗೂ ಇನ್ನೊಂದು ಸ್ಥಾನವನ್ನು ಲಿಂಗಾಯತ ಅಥವಾ ಒಕ್ಕಲಿಗ ಸಮುದಾಯಕ್ಕೆ ನೀಡಬಹುದು ಎನ್ನಲಾಗಿದೆ.

ಶಿಫಾರಸಿನಲ್ಲಿರುವ ಕೆಲವು ಹೆಸರುಗಳು:

ಎನ್‌.ರವಿಕುಮಾರ್‌

ಮಾರುತಿರಾವ್ ಮುಳೆ

ಎಂ.ರಾಜೇಂದ್ರ

ರಘು ಕೌಟಿಲ್ಯ

ಸಿ.ಮಂಜುಳಾ

ಗೀತಾ ವಿವೇಕಾನಂದ

ಲಿಂಗರಾಜ್ ಪಾಟೀಲ

ನಳಿನ್‌ಕುಮಾರ್ ಕಟೀಲ್‌