ಇತ್ತೀಚೆಗೆ ನಗರದ ಬಿನ್ನಿಮಿಲ್‌ ಸಮೀಪದ ಟ್ಯಾಂಕ್‌ ಬಂಡ್‌ ರಸ್ತೆಯಲ್ಲಿ ಕಾರೊಂದಲ್ಲಿ ಸಾಗಿಸುತ್ತಿದ್ದ ಎರಡು ಕೋಟಿ ರು. ನಗದು ಹಣ ಬಿಜೆಪಿಗೆ ಸೇರಿರುವುದು ಖಚಿತವಾಗಿದ್ದು, ಈ ಸಂಬಂಧ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ  ಎಫ್‌ಐಆರ್‌ ದಾಖಲಾಗಿದೆ.

 ಬೆಂಗಳೂರು : ಇತ್ತೀಚೆಗೆ ನಗರದ ಬಿನ್ನಿಮಿಲ್‌ ಸಮೀಪದ ಟ್ಯಾಂಕ್‌ ಬಂಡ್‌ ರಸ್ತೆಯಲ್ಲಿ ಕಾರೊಂದಲ್ಲಿ ಸಾಗಿಸುತ್ತಿದ್ದ ಎರಡು ಕೋಟಿ ರು. ನಗದು ಹಣ ಬಿಜೆಪಿಗೆ ಸೇರಿರುವುದು ಖಚಿತವಾಗಿದ್ದು, ಈ ಸಂಬಂಧ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಬಿಜೆಪಿ ರಾಜ್ಯ ಕಚೇರಿ ಕಾರ್ಯದರ್ಶಿ ಸೇರಿ ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಬಿನ್ನಿಮಿಲ್‌ ಸಮೀಪದ ಟ್ಯಾಂಕ್‌ ಬಂಡ್ ರಸ್ತೆಯಲ್ಲಿ ಚುನಾವಣಾ ಆಯೋಗವು ತಪಾಸಣಾ ಕೇಂದ್ರ ತೆರೆದಿದೆ. ಏ.20ರಂದು ಸಂಜೆ ಸುಮಾರು 4 ಗಂಟೆ ಆ ಮಾರ್ಗದಲ್ಲಿ ಬರುತ್ತಿದ್ದ ಕಾರೊಂದನ್ನು ಸ್ಥಿರ ಕಣ್ಗಾವಲು ತಂಡ(ಎಸ್‌ಎಸ್‌ಟಿ) ಹಾಗೂ ಪೊಲೀಸರು ತಪಾಸಣೆ ಮಾಡಿದಾಗ ನಗದು ಹಣವಿದ್ದ ಎರಡು ಬ್ಯಾಗ್‌ಗಳು ಪತ್ತೆಯಾಗಿದ್ದವು. ಈ ವೇಳೆ ಕಾರು ಚಾಲಕ ವೆಂಕಟೇಶ್‌ ಪ್ರಸಾದ್‌ ಮತ್ತು ಸಹಚರ ಗಂಗಾಧರ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಹಣವನ್ನು ಮೈಸೂರಿಗೆ ಸಾಗಿಸುತ್ತಿರುವುದಾಗಿ ಹೇಳಿ ಬಿಜೆಪಿ ಪತ್ರವನ್ನು ಹಾಜರುಪಡಿಸಿದ್ದಾರೆ.ಪೊಲೀಸರ ವಶದಲ್ಲಿ ಹಣ:

ಕಾರಿನಲ್ಲಿ ಪತ್ತೆಯಾದ 2 ಕೋಟಿ ಸಂಬಂಧ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಆ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಕಾನೂನು ಉಲ್ಲಂಘನೆ ಆಗಿರುವುದು ಕಂಡು ಬಂದಿದೆ. ಹೀಗಾಗಿ ಪೊಲೀಸರು ಐಪಿಸಿ ವಿವಿಧ ಸೆಕ್ಷನ್‌ಗಳು ಹಾಗು ಪ್ರಜಾಪ್ರತಿನಿಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲೆ ಮಾದರಿ ನೀತಿ ಸಂಹಿತೆ ನೋಡೆಲ್‌ ಅಧಿಕಾರಿ ಮೌನೀಶ್‌ ಮೌದ್ಗಿಲ್‌ ತಿಳಿಸಿದ್ದಾರೆ.