ಸಾರಾಂಶ
ಬೆಂಗಳೂರು : ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಬಿಜೆಪಿಯ ಮಾಜಿ ಸಚಿವರು ಹಾಗೂ ಶಾಸಕರು ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಪಕ್ಷದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರೂ ಸಭೆ ನಡೆಸಿ ಹರಿಹಾಯ್ದಿದ್ದಾರೆ.
ಅಲ್ಲದೆ, ಮಂಗಳವಾರ ಸಂಘಟನಾ ಪರ್ವ ಸಭೆಗಳ ನಿಮಿತ್ತ ದೆಹಲಿಯಿಂದ ಆಗಮಿಸುತ್ತಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ಭೇಟಿ ಮಾಡಿ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಸೋಮವಾರ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ 21 ಜಿಲ್ಲೆಗಳ ಜಿಲ್ಲಾಧ್ಯಕ್ಷರು ಸಭೆ ನಡೆಸಿ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಶಾಸಕ ಸಿ.ಕೆ.ರಾಮಮೂರ್ತಿ, ನಾವು ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನೂ ಸಭೆಗೆ ಕರೆದಿದ್ದೆವು. ಈ ಪೈಕಿ 21 ಜಿಲ್ಲೆಗಳ ಅಧ್ಯಕ್ಷರು ಭಾಗವಹಿಸಿದ್ದರು. ಕೆಲವರು ಅನಿವಾರ್ಯ ಕಾರಣಗಳಿಂದ ಬಂದಿಲ್ಲ. ಬಿಜೆಪಿ ಪಕ್ಷದಲ್ಲಿ ಗುಂಪುಗಾರಿಕೆಯಿಂದ ಈಗ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಿಗೆ ಅವಮಾನವಾಗುವಂತೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ನಮಗೆ ಪಕ್ಷ ಮುಖ್ಯ. ಪಕ್ಷ ಉಳಿಯುವುದು ಮುಖ್ಯ ಎಂದರು.
ಯತ್ನಾಳ್ ಅವರು ಯಡಿಯೂರಪ್ಪ ಬಗ್ಗೆ ಮಾತನಾಡುತ್ತಾರೆ. ವಿಜಯೇಂದ್ರ, ಡಿ.ವಿ.ಸದಾನಂದಗೌಡ, ಶೋಭಾ ಕರಂದ್ಲಾಜೆ, ನಳಿನ್‌ಕುಮಾರ್ ಕಟೀಲ್ ಎಲ್ಲ ನಾಯಕರಿಗೂ ಬೈಯುತ್ತಿದ್ದಾರೆ. ಇವರು ಪಕ್ಷಕ್ಕಿಂತ ದೊಡ್ಡವರಾ? ಪಕ್ಷ ತಾಯಿಯಂತೆ, ಆ ತಾಯಿಗೇ ಅವಮಾನ ಮಾಡ್ತಿದ್ದಾರೆ. ಪಕ್ಷದ ಬಗ್ಗೆ ಮಾತನಾಡುತ್ತಾರೆ. ಪಕ್ಷಕ್ಕೆ ಮುಜುಗರ ಆಗುತ್ತಿದೆ. ಪಕ್ಷವೇ ಮೊದಲು, ಪಕ್ಷ ತಾಯಿ ಸಮಾನ. ಪಕ್ಷದ ರಾಜ್ಯಾಧ್ಯಕ್ಷರಿಗೆ ಬೈಯ್ಯುವುದು ಕಾರ್ಯಕರ್ತರಿಗೆ ಬೈಯ್ಯುವುದಕ್ಕೆ ಸಮ. ಮಂಗಳವಾರ ದೆಹಲಿಯಿಂದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಬರುತ್ತಿದ್ದಾರೆ. ಅವರಿಗೆ ನಾವೆಲ್ಲ ಪಕ್ಷದೊಳಗೆ ಭಿನ್ನಮತ ಶಾಶ್ವತವಾಗಿ ಸರಿ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.
ಹಾವೇರಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪೂಜಾರ್ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷರಿಗೆ ಬೈದರೆ ಜಿಲ್ಲಾಧ್ಯಕ್ಷರಿಗೆ ಬೈದಂತೆ. ಯತ್ನಾಳ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತರುಣ್ ಚುಗ್ ಅವರಿಗೆ ಮನವಿ ಮಾಡುತ್ತೇವೆ. ಎರಡರಲ್ಲೊಂದು ಆಗಬೇಕು. ಯತ್ನಾಳ್ ಅವರನ್ನು ಪಕ್ಷದಿಂದ ಹೊರ ಹಾಕಬೇಕು. ಮುಲಾಜೇ ನೋಡಬಾರದು ಎಂದು ಆಗ್ರಹಿಸಿದರು.