ಸಾರಾಂಶ
ಬೆಂಗಳೂರು: ಬಿ.ಪ್ಯಾಕ್ ಸಂಸ್ಥೆ ಬೆಂಗಳೂರಿನ ಮೂವರು ಸಂಸದರು ಸಂಸತ್ ಅಧಿವೇಶನಗಳಲ್ಲಿ ಭಾಗವಹಿಸಿದ್ದ ಅವಧಿ ಮತ್ತು ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅನುದಾನ ಬಳಕೆ ಕುರಿತ ವರದಿಯನ್ನು ಶನಿವಾರ ಬಿಡುಗಡೆ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ವರದಿ ಬಿಡುಗಡೆಗೊಳಿಸಿದ ಬಿ.ಪ್ಯಾಕ್ ಮುಖ್ಯಸ್ಥೆ ರೇವತಿ ಅಶೋಕ್, 17ನೇ ಲೋಕಸಭೆಯ ಅವಧಿಯಲ್ಲಿ 273 ದಿನ ಸಂಸತ್ ಅಧಿವೇಶನ ನಡೆದಿದೆ. ಇದರಲ್ಲಿ ಸಂಸದರ ರಾಷ್ಟ್ರೀಯ ಸರಾಸರಿ ಹಾಜರಾತಿ ಶೇ.79 ಮತ್ತು ಕರ್ನಾಟಕದ ಸಂಸದರ ಸರಾಸರಿ ಹಾಜರಾತಿ ಶೇ.71 ಇದೆ. ಈ ಪೈಕಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ 224 ದಿನಗಳು(ಶೇ.82), ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಎಲ್.ಎಸ್.ತೇಜಸ್ವಿಸೂರ್ಯ 212 ದಿನಗಳು (ಶೇ.78) ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ 100 ದಿನಗಳು (ಶೇ.63) ಅಧಿವೇಶನದಲ್ಲಿ ಹಾಜರಾಗಿದ್ದಾರೆ.
ಡಿ.ವಿ.ಸದಾನಂದಗೌಡ ಅವರು, 2019 ಮೇ 30ರಿಂದ 2021 ಜುಲೈ 7ರವರೆಗೆ ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ಸೇವೆಯಲ್ಲಿದ್ದರು. ಮಂತ್ರಿಯಾದವರು ಚರ್ಚೆಗಳಲ್ಲಿ ಸರ್ಕಾರವನ್ನು ಪ್ರತಿನಿಧಿಸುತ್ತಾರೆ. ಆದ್ದರಿಂದ ಅವರು ಹಾಜರಾತಿ ನೋಂದಣಿಯಲ್ಲಿ ಸಹಿ ಹಾಕುವುದಿಲ್ಲ ಎಂದರು.
2019ರಿಂದ 2024ರವರೆಗೆ ಬೆಂಗಳೂರು ನಗರದ ಮೂರು ಸಂಸದರು ಐದು ವರ್ಷಗಳ ಸಂಸತ್ ಅವಧಿಯಲ್ಲಿ ಒಟ್ಟು ಅನುದಾನ ₹55.88 ಕೋಟಿಗಳನ್ನು ಶಿಫಾರಸ್ಸು ಮಾಡಿದ್ದರು. ಅದರಲ್ಲಿ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ₹23.47 ಕೋಟಿ, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ನಿರ್ವಹಣೆಗೆ ₹16.03 ಕೋಟಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ₹7.27 ಕೋಟಿ ಖರ್ಚು ಮಾಡಲಾಗಿದೆ ಎಂದರು.
ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ, ₹18.69 ಕೋಟಿ ಶಿಫಾರಸು ಮಾಡಿದ್ದಾರೆ. ₹9.18 ಕೋಟಿಯನ್ನು ಸಾರ್ವಜನಿಕ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗೆ ನೀಡಲಾಗಿದೆ. ₹6.38 ಕೋಟಿಯನ್ನು ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗೆ ಕೊಡಲಾಗಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ₹6 ಕೋಟಿ ನೀಡಲಾಗಿದೆ. ಐದು ವರ್ಷದ ಅವಧಿಯಲ್ಲಿ ಕೈಗೊಂಡ ಸ್ಥಳೀಯ ಅಭಿವೃದ್ಧಿ ಯೋಜನೆಗಳನ್ನು ಗಮನಿಸಿದಾಗ ₹4.35 ಕೋಟಿ ಅನುದಾನವನ್ನು 2022-23ರಲ್ಲಿ ಕಾಮಗಾರಿಗಳಿಗೆ ಶಿಫಾರಸು ಮಾಡಿರುವುದು ಕಂಡು ಬಂದಿದೆ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಒಟ್ಟು ₹19.36 ಕೋಟಿಯನ್ನು ಶಿಫಾರಸು ಮಾಡಿದ್ದಾರೆ. ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗೆ ₹8.86 ಕೋಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾಮಗಾರಿಗೆ ₹3.79 ಕೋಟಿ ಮತ್ತು ಬಸವನಗುಡಿ ವಿಧಾನಸಭಾ ಕ್ಷೇತ್ರಕ್ಕೆ ₹4.33 ಕೋಟಿ ಹಾಗೂ ಜಯನಗರ ವಿಧಾನ ಸಭಾಕ್ಷೇತ್ರಕ್ಕೆ ₹4.32 ಕೋಟಿ ಅನುದಾನ ನೀಡಲಾಗಿದೆ. 2022-23ರಲ್ಲಿ ಸ್ಥಳೀಯ ಯೋಜನೆಗೆ ₹3.38 ಕೋಟಿ ಅನುದಾನ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ.ಸಿ.ಮೋಹನ್, ₹17.79 ಕೋಟಿಯನ್ನು ಶಿಫಾರಸು ಮಾಡಿದ್ದು, ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗೆ ₹6.58 ಕೋಟಿಯನ್ನು ನೀಡಲಾಗಿದೆ. ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ₹5.42 ಕೋಟಿ, ಚಾಮರಾಜಪೇಟೆ ಕ್ಷೇತ್ರಕ್ಕೆ ₹3.42 ಕೋಟಿ ಕೊಡಲಾಗಿದೆ. ₹3.42 ಕೋಟಿ ಅನುದಾನವನ್ನು 2022-23ರಲ್ಲಿ ಕಾಮಗಾರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದರು.