14ರಿಂದ 70ನೇ ರಾಷ್ಟ್ರೀಯ ಸಹಕಾರ ಸಪ್ತಾಹ

| Published : Nov 14 2023, 01:15 AM IST

ಸಾರಾಂಶ

ಸಹಕಾರಿ ಮಹಾಮಂಡಳದ ವತಿಯಿಂದ 70ನೇ ರಾಷ್ಟ್ರೀಯ ಸಹಕಾರ ಸಪ್ತಾಹ ಪಂ.ನೆಹರು ಜನ್ಮದಿನ 14ರಿಂದ ಒಂದು ವಾರ ಕಾಲ ನಡೆಯಲಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ಸಹಕಾರಿ ಮಹಾಮಂಡಳದ ವತಿಯಿಂದ 70ನೇ ರಾಷ್ಟ್ರೀಯ ಸಹಕಾರ ಸಪ್ತಾಹ ಪಂ.ನೆಹರು ಜನ್ಮದಿನ 14ರಿಂದ ಒಂದು ವಾರ ಕಾಲ ನಡೆಯಲಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 14ರಂದು ಶಿವಮೊಗ್ಗದಲ್ಲಿ ಆರಂಭವಾಗುವ ಸಪ್ತಾಹದ ಕಾರ್ಯಕ್ರಮಗಳು, 15ರಂದು ರಾಯಚೂರು, 16ರಂದು ಕಲ್ಲಗಟಗಿ, 17ರಂದು ಶಿರಸಿ, 18ರಂದು ಮಂಗಳೂರು, 19 ಬೆಂಗಳೂರು ಮತ್ತು 20ರಂದು ವಿಜಯಪುರದಲ್ಲಿ ನಡೆಯಲಿದೆ. 20ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಹಕಾರಿ ರತ್ನ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಲಿದ್ದಾರೆ ಎಂದರು.

1950 ಸಹಕಾರಿ ಕಾಯ್ದೆಯಂತೆ ಎಲ್ಲಾ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರದಲ್ಲಿ ಒಂದು ಬಹುರಾಜ್ಯ ಕಾಯ್ದೆ ಇದೆ. ಕೇಂದ್ರ ಸರ್ಕಾರ ಏನೇ ಸಹಕಾರಿ ಕೇತ್ರಕ್ಕೆ ತಿದ್ದುಪಡಿ ತಂದರೂ ಕೇಂದ್ರ ಕಾಯ್ದೆಗೆ ಮಾತ್ರ ತರಲು ಸಾಧ್ಯ ಎಂದು ಕೆ.ಎನ್. ರಾಜಣ್ಣ ಹೇಳಿದರು.

97ನೇ ಸಂವಿಧಾನ ತಿದ್ದುಪಡಿಯ ಮೂಲಕ ಕೆಲ ಮಾರ್ಪಾಡು ಮಾಡಿದ್ದಾರೆ. ಅದರಂತೆ ಸಹಕಾರಿ ಕಾಯ್ದೆ-1950ರಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಆದರೆ, ಈ ವಿಚಾರ ಸುಪ್ರೀಂಕೋರ್ಟಿನಲ್ಲಿದೆ. ಹಾಗಾಗಿ, ತಿದ್ದುಪಡಿ ಅನ್ವಯ ಯಾವ ವಿಚಾರಗಳನ್ನು ತೆಗೆದುಕೊಳ್ಳಬೇಕು ಎಂದು ಕೂಲಂಕುಷ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಮಾಜಿ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಇದರಲ್ಲಿ ಜಿ.ಟಿ. ದೇವೇಗೌಡ, ಕೆ. ಷಡಕ್ಷರಿ, ಹೆಬ್ಬಾರ್, ಎಸ್.ಆರ್. ಪಾಟೀಲ್, ಆರ್.ರಾಜೇಂದ್ರ, ರಾಜೇಂದ್ರಕುಮಾರ್ ಅವರು ನೀಡಿದ ವರದಿಯ ಮೇಲೆ ಯಾವುದನ್ನು ತುರ್ತಾಗಿ ತರಬೇಕೆಂದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು.

ಪತ್ತಿನ ಸಹಕಾರಿ ಸಂಘಗಳಲ್ಲಿ ಕೆಲವು ಗೊಂದಲಗಳಿವೆ. ಸಹಕಾರಿ ಬ್ಯಾಂಕುಗಳಿಗಿಂತ, ಸೌಹಾರ್ದ ಸಂಘಗಳು ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿ ನೀಡುವುದರಿಂದ ಬಹುತೇಕರು ಅಲ್ಲಿ ಡಿಪಾಸಿಟ್ ಇಡುತ್ತಾರೆ. ಆದರೆ, ಬ್ಯಾಂಕು ದಿವಾಳಿಯಾದಂತಹ ವೇಳೆ ಗ್ರಾಹಕರ ಠೇವಣಿ ಹಣ ಹಿಂದಿರುಗಿಸುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಮಧ್ಯ ಪ್ರವೇಶಿಸಬೇಕಾಗುತ್ತದೆ. ಸೌಹಾರ್ದ ಸಹಕಾರಿ ಸಂಸ್ಥೆಗಳ ಮೇಲೆ ಸರ್ಕಾರದ ಯಾವುದೇ ಹಿಡಿತ ಇರಲ್ಲ. ಆದರೆ, ಜನರು ಸರ್ಕಾರವನ್ನು ದೂಷಿಸುತ್ತಾರೆ. ೧೪೦೦ ಸೌಹಾರ್ದ ಪತ್ತಿನ ಸಹಕಾರ ಸಂಘಗಳಲ್ಲಿ ಶೇ.೩೦ರಷ್ಟು ಡಿಫಾಲ್ಟ್ ಇವೆ. ಈ ಕಾಯ್ದೆ ಅವಶ್ಯಕವೇ, ಹಾಗಾದರೆ, ಏನೇನು ತಿದ್ದುಪಡಿ ತರಬೇಕು ಎಂಬ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದರು.

ಡಿ. 6ಕ್ಕೆ ಸೋಮಣ್ಣ ಕಾರ್ಯಕ್ರಮ: ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರುವ ವಿಚಾರ ತಿಳಿಸಿದ ಕೆ.ಎನ್.ರಾಜಣ್ಣ, ಸಿದ್ದಗಂಗಾ ಮಠದಲ್ಲಿ ಸೋಮಣ್ಣ ದೊಡ್ಡ ಕಾರ್ಯಕ್ರಮ ಮಾಡುತಿದ್ದಾರೆ. ಅದಕ್ಕೆ ನನ್ನನು ಆಹ್ವಾನಿಸಿದ್ದಾರೆ. ಕಾಂಗ್ರೆಸ್ ಎನ್ನುವುದು ಒಂದು ಮಹಾಸಾಗರ. ಅಲ್ಲಿಗೆ ಗಂಗಾನದಿ ನೀರು ಬರುತ್ತದೆ. ಕಾವೇರಿ ನೀರು ಸೇರುತ್ತದೆ. ಹಾಗೆಯೇ ಕಾಂಗ್ರೆಸ್ ಸಾಮೂಹಿಕ ನಾಯಕತ್ವದ ಪಾರ್ಟಿ. ಕೇಡರ್ ಬೇಸ್ ಪಾರ್ಟಿಯಲ್ಲ ಎಂದರು.

ನಾನು, ಸಹ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಇಚ್ಚಿಸಿದ್ದೇನೆ. ಲೋಕಸಭೆಯನ್ನು ಒಮ್ಮೆ ನೋಡುವ ಆಸೆಯಿದೆ. ಹೈಕಮಾಂಡ್ ಒಪ್ಪಿ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ಮುದ್ದಹನುಮೇಗೌಡ ಕಾಂಗ್ರೆಸ್‌ಗೆ ಬರುವ ಬಗ್ಗೆ ನನ್ನ ಬಳಿಯೂ ಕೆಲವರು ಚರ್ಚಿಸಿದ್ದಾರೆ. ಡಾ.ಜಿ.ಪರಮೇಶ್ವರ್ ಹತ್ತಿರವೂ ಕೆಲವರು ಪ್ರಾಸ್ತಾಪಿಸಿದ್ದಾರೆ ಎನ್ನಲಾಗಿದೆ. ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಕಾಂಗ್ರೆಸ್ ಸೇರುವ ವಿಚಾರ ಗೊತ್ತಿಲ್ಲ. ಐದು ರಾಜ್ಯಗಳ ಚುನಾವಣೆ ನಂತರ ಮತ್ತಷ್ಟು ಬದಲಾವಣೆ ಸಾಧ್ಯತೆ ಇದೆ ಎಂದರು.

ತಳಸಮುದಾಯಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಬೇಕಿದೆ. ಒಂದೇ ಮನೆಯಲ್ಲಿ ನಾನು ಎಂ.ಎಲ್.ಎ, ನನ್ನ ಮಗ ಎಂ.ಎಲ್.ಸಿ. ಅನ್ನುವ ತರ ಆಗಬಾರದು. ಧ್ವನಿ ಇಲ್ಲದ ಸಮುದಾಯಗಳ ಕಥೆ ಏನು?. ಸಣ್ಣ ಪುಟ್ಟ ಸಮುದಾಯಗಳಿಗೆ ಅಧಿಕಾರ ಸಿಕ್ಕರೆ ಮಾತ್ರ ಸಾಮಾಜಿಕ ನ್ಯಾಯಕ್ಕೆ ಒಂದು ಬೆಲೆ. ಇಲ್ಲದಿದ್ದರೆ ಅದು ಪುಸ್ತಕಕ್ಕೆ ಸೀಮಿತವಾಗಲಿದೆ ಎಂದು ರಾಜಣ್ಣ ಹೇಳಿದರು.

ಶೀಘ್ರದಲ್ಲಿಯೇ ಜಾತಿ ಗಣತಿ ವರದಿಯನ್ನು ಸರ್ಕಾರದ ಸ್ವೀಕರಿಸಲಿದೆ. ಅದನ್ನು ಸಾರ್ವಜನಿಕರ ಚರ್ಚೆಗೆ ಬಿಡಲಾಗುವುದು. ಅಲ್ಲಿ ಬರುವ ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಿ, ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ವರದಿ ಬಂದಾಕ್ಷಣ ಒಪ್ಪಬೇಕೆಂಬ ನಿಯಮವಿಲ್ಲ. ಹಾಗಾಗಿ, ಕಾಂತರಾಜು ವರದಿಯನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. ವರದಿ ಸಾರ್ವಜನಿಕ ಚರ್ಚೆಗೆ ಬರದೆ ಅದು ಸರಿಯಿಲ್ಲ. ಇದು ಸರಿಯಿಲ್ಲ ಎಂದು ಹೇಳುವುದು ನ್ಯಾಯವಲ್ಲ. ಮೊದಲು ವರದಿಯನ್ನು ಓದಿ ನಂತರ ಅದನ್ನು ಒಪ್ಪಿಕೊಳ್ಳುವುದು ಬಿಡುವುದರ ಬಗ್ಗೆ ಚರ್ಚೆ ನಡೆಸೋಣ ಎಂದರು.