ಕಾಂಗ್ರೆಸ್ ಪಕ್ಷವು ನೂರು ವರ್ಷಗಳ ಇತಿಹಾಸ ಹೊಂದಿದ್ದು, ಯಾರೂ ದ್ರೋಹ ಬಗೆಯಬಾರದು : ಎಂ.ನಾರಾಯಣಸ್ವಾಮಿ

| Published : Sep 29 2024, 01:31 AM IST / Updated: Sep 29 2024, 04:26 AM IST

ಸಾರಾಂಶ

ಕಾಂಗ್ರೆಸ್ ಪಕ್ಷವು ನೂರು ವರ್ಷಗಳ ಇತಿಹಾಸ ಹೊಂದಿದ್ದು, ಯಾರೂ ದ್ರೋಹ ಬಗೆಯಬಾರದು ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಎಂ.ನಾರಾಯಣಸ್ವಾಮಿ ಕಿವಿಮಾತು ಹೇಳಿದರು.  

 ಕೋಲಾರ :  ಕಾಂಗ್ರೆಸ್‌ನಿಂದಾಗಿ ನಾವೇ ಹೊರತು ನಮ್ಮಿಂದ ಕಾಂಗ್ರೆಸ್‌ ಅಲ್ಲ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ. ಪಕ್ಷಕ್ಕೆ ನೂರು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ, ತಾಯಿ ಸಮಾನ ಪಕ್ಷಕ್ಕೆ ಯಾರೂ ದ್ರೋಹ ಬಗೆಯ ಬಾರದು ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್‌ ಉಸ್ತುವಾರಿ ಹಾಗೂ ಮಾಜಿ ಎಂಎಲ್ಸಿ ಎಂ.ನಾರಾಯಣಸ್ವಾಮಿ ಕಿವಿಮಾತು ಹೇಳಿದರು.

ತಾಲೂಕಿನ ಕುಂಬಾರಹಳ್ಳಿಯ ನಂದಿನಿ ಪ್ಯಾಲೇಸ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಂಘಟನಾ ಸಭೆಯಲ್ಲಿ ಮಾತನಾಡಿ, ಕಾರ್ಯಕರ್ತರಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ನನಗೆ ಪ್ರತ್ಯೇಕವಾಗಿ ತಿಳಿಸಿ ಅದನ್ನು ಬಗೆ ಹರಿಸಲು ಪ್ರಯತ್ನಿಸುತ್ತೇನೆ ಗಂಭೀರ ವಿಷಯಗಳಾದರೆ ಕೆ.ಪಿ.ಸಿ.ಸಿ ಅಧ್ಯಕ್ಷರ ಗಮನಕ್ಕೆ ತಂದು ಬಗೆಹರಿಸುತ್ತೇವೆ ಎಂದು ಹೇಳಿದರು.

ಪಕ್ಷದ ಬಗ್ಗೆ ತಪ್ಪು ಸಂದೇಶ

ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ಇಂದಿನ ಸಭೆಯಲ್ಲಿ ಉಂಟಾದ ಗೊಂದಲ ರಾಜ್ಯದಲ್ಲಿ ಕಾಂಗ್ರೆಸ್ ಬಗ್ಗೆ ಮಾತನಾಡಿಕೊಳ್ಳುವಂತಾಯಿತು, ಸಣ್ಣ ಪುಟ್ಟ ವಿಷಯಗಳನ್ನು ಬಹಿರಂಗವಾದ ಸಭೆಗಳಲ್ಲಿ ಪ್ರಸ್ತಾಪ ಮಾಡದೆ ಮುಖಂಡರ ಬಳಿ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬೇಕು, ಇಂತಹ ಪ್ರಕರಣಗಳು ಸಂಘಟನೆಗೆ ಆಡಚಣೆಯಾಗಲಿದೆ, ಸಮಾಜದಲ್ಲಿ ತಪ್ಪು ಸಂದೇಶಗಳು ಹೋಗಲಿದೆ ಎಂದು ಎಚ್ಚರಿಸಿದರು.

 ಪಕ್ಷವು ಪ್ರಾಮಾಣಿಕರನ್ನು ಗುರುತಿಸಿ ಸ್ಥಾನ ಮಾನ ನೀಡಲಿದೆ ಎಂಬುವುದಕ್ಕೆ ಶಾಸಕರಾದ ರೂಪಕಲಾ ಶಶಿಧರ್, ಎಸ್.ನಾರಾಯಣಸ್ವಾಮಿ, ಕೆ.ಹೆಚ್.ಮುನಿಯಪ್ಪ, ನಂಜೇಗೌಡರು, ನನಗೆ ಸೇರಿದಂತೆ ಎಲ್ಲರಿಗೂ ಹಂತ ಹಂತವಾಗಿ ಸ್ಥಾನಮಾನ ನೀಡಿದೆ. ಇದೇ ರೀತಿ ಪಕ್ಷ ಪದಾಧಿಕಾರಿಗಳಿಗೆ ಕಾರ್ಯಕರ್ತರಿಗೂ ಅವಕಾಶ ನೀಡಲಿದೆ. ಅವಕಾಶ ಸಿಗುವವರೆಗೂ ತಾಳ್ಮೇಯಿಂದ ಇರಬೇಕೆಂದು ಮನವಿ ಮಾಡಿದರು. ಬಹಿರಂಗ ಚರ್ಚೆ ಬೇಡ

ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಪಕ್ಷದಲ್ಲಿ, ಏನೇ ಸಮಸ್ಯೆಗಳಿದ್ದರೂ ಉಸ್ತುವಾರಿ ನಾರಾಯಣಸ್ವಾಮಿ ಬಳಿ ಪ್ರತ್ಯೇಕವಾಗಿ ಚರ್ಚಿಸಬೇಕೆ ಹೊರತಾಗಿ ಬಹಿರಂಗವಾಗಿ ತಿಳಿಸುವುದರಿಂದ ಗೊಂದಲಗಳಿಗೆ ಅವಕಾಶ ಕಲ್ಪಿಸಿದಂತಾಗುವುದು ಎಂದರು.

ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಮುಖಂಡ ಗೌತಮ್, ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ, ಜಿಲ್ಲಾ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಗ್ಯಾರಂಟಿ ಅನುಷ್ಠನಾ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಬ್ಲಾಕ್ ಅಧ್ಯಕ್ಷರಾದ ಪ್ರಸಾದ್ ಬಾಬು, ಉದಯಶಂಕರ್, ಎಸ್.ಸಿ. ಘಟಕ ಅಧ್ಯಕ್ಷ ಜಯದೇವ, ಕುಡಾ ಅಧ್ಯಕ್ಷ ಹನೀಫ್, ಹಾಲು ಒಕ್ಕೂಟದ ನಿರ್ದೇಶಕ ಷರೀಫ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀ ದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ರತ್ನಮ್ಮ, ರಾಜ್ಯ ಮಹಿಳಾ ಕಾಂಗ್ರೆಸ್ ಸಂಚಾಲಕಿ ವಸಂತ ಕವಿತಾ, ಕೆ.ಪಿ.ಸಿ.ಸಿ ಸದಸ್ಯರಾದ ಕಾರ್ತಿಕ್, ಅಕ್ರಂ, ವೆಂಕಟೇಶ್, ಗೋಪಾಲ್ ಇದ್ದರು.