ಸಾರಾಂಶ
ನವದೆಹಲಿ: ಮಧುಮೇಹದಿಂದ ಬಳಲುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತಿಹಾರ್ ಜೈಲಿನಲ್ಲಿ ನೀಡುತ್ತಿರುವ ವೈದ್ಯಕೀಯ ಸೌಲಭ್ಯದ ಕುರಿತು ಆಮ್‌ಆದ್ಮಿ ಪಕ್ಷ ಮತ್ತು ತಿಹಾರ್ ಜೈಲು ಅಧಿಕಾರಿಗಳ ನಡುವೆ ಜಟಾಪಟಿ ಆರಂಭವಾಗಿದೆ.
ಜೈಲಿನಲ್ಲಿ ಕೇಜ್ರಿವಾಲ್‌ಗೆ ಇನ್ಸುಲಿನ್ ಮತ್ತು ವೈದ್ಯರ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದ ಆಪ್ ನಾಯಕರು ಇದೀಗ ತಮ್ಮ ವಾಗ್ದಾಳಿ ತೀವ್ರಗೊಳಿಸಿದ್ದಾರೆ. ಆಪ್ ಸಚಿವ ಸೌರಭ್ ಭಾರದ್ವಾಜ್ ಮಾತನಾಡಿ, ‘ಮಧುಮೇಹಿಗಳಿಗೆ ಅಗತ್ಯವಾದ ಎಲ್ಲಾ ಚಿಕಿತ್ಸೆ ತಿಹಾರ್ ಜೈಲಿನೊಳಗೇ ಇದೆ ಎಂದು ಈ ಮೊದಲು ಅಧಿಕಾರಿಗಳು ಹೇಳಿಕೊಂಡಿದ್ದರು. ಆದರೆ ಶನಿವಾರ ಏಮ್ಸ್‌ಗೆ ಪತ್ರ ಬರೆದಿರುವ ಜೈಲಧಿಕಾರಿಗಳು ಹಿರಿಯ ಮಧುಮೇಹ ತಜ್ಞ ವೈದ್ಯರ ನಿಯೋಜನೆಗೆ ಏಮ್ಸ್ ಆಸ್ಪತ್ರೆಗೆ ಕೋರಿದ್ದಾರೆ. ಸಿಎಂ ದಾಖಲಾದ 20 ದಿನಗಳ ಬಳಿಕ ಇದೀಗ ಮಧುಮೇಹ ತಜ್ಞರನ್ನು ಕರೆಸಲಾಗುತ್ತಿದೆ’ ಎಂದು ಕಿಡಿಕಾರಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಜೈಲಧಿಕಾರಿಗಳು, ‘ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಕೋರಿಕೆ ಮೇರೆಗೆ ಏಮ್ಸ್‌ನ ಹಿರಿಯ ವೈದ್ಯರು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಕೇಜ್ರಿವಾಲ್ ಜೊತೆ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಅವರ ಆರೋಗ್ಯದಲ್ಲಿ ಆತಂಕಪಡುವಂಥದ್ದು ಏನೂ ಇಲ್ಲ ಮತ್ತು ಹಾಲಿ ಪಡೆಯುತ್ತಿರುವ ಔಷಧವನ್ನು ಮುಂದುವರೆಸುವಂತೆ ಸೂಚಿಸಿದ್ದಾರೆ. ಈ ಸಮಾಲೋಚನೆ ವೇಳೆ ಕೇಜ್ರಿವಾಲ್ ಕೂಡಾ ಇನ್ಸುಲಿನ್ ಬಗ್ಗೆ ಪ್ರಸ್ತಾಪಿಸಿಲ್ಲ, ವೈದ್ಯರೂ ಈ ಬಗ್ಗೆ ಸಲಹೆ ನೀಡಲಿಲ್ಲ. ಇದನ್ನು ಮುಂದಿನ ದಿನಗಳಲ್ಲಿ ಕಾಲಕಾಲಕ್ಕೆ ಪರಿಶೀಲನೆ ನಡೆಸಲಾಗುವುದು’ ಎಂದು ಹೇಳಿದ್ಧಾರೆ.
ಆದರೆ ಜೈಲಧಿಕಾರಿಗಳ ಈ ಸ್ಪಷ್ಟನೆ ಹೊರತಾಗಿಯೂ ಜೈಲಿನಲ್ಲಿ ಕೇಜ್ರಿವಾಲ್‌ಗೆ ಹಾನಿ ಎಸಗಲು ಸಂಚು ರೂಪಿಸಲಾಗಿದೆ ಎಂದು ಭಾರಧ್ವಾಜ್ ಆರೋಪಿಸಿದ್ದಾರೆ.