ಸಾರಾಂಶ
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಆರೋಗ್ಯದಲ್ಲಿ ಏರುಪೇರಾದ ಕಾರಣ ವೈದ್ಯರ ಸಲಹೆಯಂತೆ ಬೆಂಗಳೂರಿನಲ್ಲಿಯೇ ಇದ್ದರೂ ರಾಜ್ಯಸಭಾ ಚುನಾವಣೆಗೆ ಮತದಾನ ಮಾಡಲು ಹೋಗಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ರಾಜ್ಯಸಭಾ ಚುನಾವಣೆಯಿಂದ ದೂರ ಉಳಿದಿರುವ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಶಾಸಕನಾಗಿರುವ ನನಗೆ ಕಾಂಗ್ರೆಸ್ ಸೇರುವ ಅಗತ್ಯವೇ ಇಲ್ಲ. 40 ವರ್ಷದ ಸುದೀರ್ಘ ರಾಜಕೀಯ ಅನುಭವವಿರುವ ನನಗೆ, ಕಾನೂನಿನ ತಿಳುವಳಿಕೆಯೂ ಇದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನನ್ನನ್ನು ಕೆಲವು ಬಿಜೆಪಿ ಮುಖಂಡರೇ ಸೋಲಿಸಲು ಹರಸಾಹಸ ಪಟ್ಟಿದ್ದರು. ಚುನಾವಣೆಯಲ್ಲಿ ನನ್ನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದವರ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಕೆಲವರಿಗೆ ಶೋಕಾಸ್ ನೋಟಿಸ್ ನೀಡಿ ವಾಪಸ್ ಪಡೆದರು.
ನಾನು ಇನ್ನೂ ತಾಳ್ಮೆ ಕಳೆದುಕೊಳ್ಳದೆ ಪಕ್ಷದಲ್ಲಿ ಮುಂದುವರಿದಿದ್ದು, ಪಕ್ಷದ ನಾಯಕರ ನಿರ್ಣಯಗಳ ಬಗ್ಗೆ ಸಮಾಧಾನದಿಂದ ಕಾದು ನೋಡುತ್ತೇನೆ. ನನ್ನ ಬೇಡಿಕೆಗೆ ಪಕ್ಷ ಇನ್ನಾದರೂ ಸ್ಪಂದಿಸುತ್ತದೆ ಎಂಬ ವಿಶ್ವಾಸ ನನಗಿದೆ.
ನೂತನ ಜಿಲ್ಲಾಧ್ಯಕ್ಷರು, ತಾಲೂಕಾಧ್ಯಕ್ಷರ ನಿಯೋಜನೆ ಸಂದರ್ಭದಲ್ಲಿ ಸೌಜನ್ಯಕ್ಕಾಗಿಯೂ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಾಸ್ತವಿಕವಾಗಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ನನ್ನ ಮತದ ಅಗತ್ಯವಿರಲಿಲ್ಲವೆಂಬ ಸಂಗತಿ ಎಲ್ಲರಿಗೂ ಗೊತ್ತಿದೆ. ಜೆಡಿಎಸ್‌ನ 5ನೇ ಅಭ್ಯರ್ಥಿ ಸೋಲುವರೆಂಬ ಲೆಕ್ಕಾಚಾರವೂ ಇತ್ತು. ನನ್ನ ಒಂದು ಮತದಿಂದ ಅವರ ಗೆಲುವು ಅಸಾಧ್ಯವೆಂಬ ಪರಿಜ್ಞಾನ ನನಗಿದೆ.
ನಾನು ಪಕ್ಷಕ್ಕೆ ನಿಷ್ಟನಾಗಿದ್ದೇನೆ. ಹಾಗಂತ ನನಗೆ ಯಾರ ಬಗೆಗೂ ಭಯ, ಆತಂಕಗಳಿಲ್ಲ. ನನ್ನ ಕುರಿತು ಆಕ್ಷೇಪಿಸುವವರು ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಇದೇ ಚುನಾವಣೆ ಹೇಗೆ ನಡೆದಿದೆ ಎಂಬುದನ್ನು ಅವಲೋಕಿಸಬೇಕು.
ಈ ದೃಷ್ಟಿಯಿಂದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳಿಂದ ಜನರಿಗೆ ಮತ್ತಷ್ಟು ಗೊಂದಲವಾಗಬಾರದೆಂಬ ಉದ್ದೇಶದಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಹೆಬ್ಬಾರ್ ವಿವರಿಸಿದರು.