ಸಾರಾಂಶ
ಟೇಕಲ್ : ಕಲ್ಲುಕುಟಿಕರ ಸಮಸ್ಯೆ ಬಗ್ಗೆ ಸರ್ಕಾರದ ಜತೆ ಚರ್ಚಿಸಿ ತಾತ್ಕಾಲಿಕವಾಗಿ ಬಂಡೆ ಕೆಲಸ ಪ್ರಾರಂಭಿಸಲು ಮಾನದಂಡ ರೂಪಿಸಿ, ನಂತರ ಹಂತ ಹಂತವಾಗಿ ಸಮಸ್ಯೆಗಳಿಗೆ ಕಾನೂನು ಪ್ರಕಾರ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಶಾಸಕ ಕೆ.ವೈ.ನಂಜೇಗೌಡ ಭರವಸೆ ನೀಡಿದರು.
ಟೇಕಲ್‌ನ ಹುಣಸೀಕೋಟೆಯಲ್ಲಿ ಕಲ್ಲು ಕುಟಿಕರ ಅಹವಾಲು ಆಲಿಸಿದ ಶಾಸಕರು, ಈ ಹಿಂದೆ ವಿಧಾನಭೆಯ ಕಲಾಪದಲ್ಲಿ ಕಲ್ಲು ಕುಟಿಕರ ಸಮಸ್ಯೆ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದೆ, ಅದು ಸರ್ಕಾರದ ಪರಿಶೀಲನೆಯಲ್ಲಿತ್ತು. ನಂತರ ಸರ್ಕಾರ ಬದಲಾಯಿತು. ಇದೀಗ ನಮ್ಮದೇ ಸರ್ಕಾರ ಬಂದಿರುವುದರಿಂದ ಸರ್ಕಾರದ ಮೇಲೆ ಒತ್ತಡ ತಂದು ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು
ಶಾಶ್ವತ ಪರಿಹಾರಕ್ಕೆ ಕ್ರಮ
ಸುಮಾರು 50 ವರ್ಷದಿಂದ ಈ ಭಾಗದಲ್ಲಿ ಕಲ್ಲು ಕುಟಿಕರು ಕಲ್ಲು ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅದು ಅವರ ಕುಲ ಕಸುಬು. ಅವರಿಗೆ ಮೊದಲು ಶಾಶ್ವತ ಪರಿಹಾರ ಮಾಡಿಕೊಡಬೇಕು. ಇದಕ್ಕೆ ತಾವು ಒತ್ತು ನೀಡುವುದಾಗಿ ಹೇಳಿದರು.
ಮಾಜಿ ಶಾಸಕರ ಟೀಕೆಗೆ ಟಾಂಗ್
ಸಮಸ್ಯೆಯಿರುವುದು ಕಲ್ಲು ಕುಟಿಕರ ಜೀವನದ ಬಗ್ಗೆ, ಆದರೆ ಮಾಜಿ ಶಾಸಕರು ತಮ್ಮನ್ನೇ ಗುರಿಯಲ್ಲ್ಲಿಟ್ಟುಕೊಂಡು ಟೀಕಿಸುತ್ತಿರುವುದು ಸರಿಯಲ್ಲ. ಈ ಭಾಗದಲ್ಲಿ ನನ್ನ ಸಂಬಂಧಿಕರಾಗಲೀ ಕುಟುಂಬಸ್ಥರಾಗಲೀ ಯಾರು ಬಂಡೆ ಕೆಲಸ ಮಾಡುತ್ತಿಲ್ಲ. ಗುತ್ತಿಗೆಯೂ ಪಡೆದಿಲ್ಲ, ಇನ್ನು ಮಾಜಿ ಸಚಿವರ ಅವರ ಶಿಷ್ಯ ಇಲ್ಲಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದು ಆತನ ಬಂಡೆಯಲ್ಲಿ ಬಂಡೆ ಉರಳಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವುದು ಎಲ್ಲರಿಗೂ ತಿಳಿದ ವಿಷಯ ಎಂದರು.
ಟೇಕಲ್ ವ್ಯಾಪ್ತಿಯಲ್ಲಿ ಇರುವ ಜಲ್ಲಿ ಕ್ರಷರ್‌ಗಳಿಗೆ ಪರವಾನಗಿ ನೀಡುವುದು ಸರ್ಕಾರ. ಪರವಾನಿಗೆ ಇಲ್ಲದಿರುವ ಕಲ್ಲು ಸಾಗಿಸಲು ಲಾರಿಗಳನ್ನುಅಧಿಕಾರಿಗಳು ಬಿಡುವುದೇ ಇಲ್ಲ, ಇಲ್ಲಿ ಯಾವುದೇ ಲಾರಿಗಳು ಅಕ್ರಮವಾಗಿ ಓಡಾಡಲು ಸಾಧ್ಯವಿಲ್ಲ. ಸುಮ್ಮನೇ ಜನರನ್ನು ತಪ್ಪು ದಾರಿಗೆಳೆಯುವುದನ್ನು ನಿಲ್ಲಿಸಲು ಎಂದರು.ಮಾತನಾಡುವ ನೈತಿಕ ಹಕ್ಕಿಲ್ಲ
ಬಿಜೆಪಿ ಸರ್ಕಾರ ಇದ್ದಾಗ ಇಲ್ಲಿಯ ಕಲ್ಲು ಕುಟಿಕರಿಗೆ ಯಾವ ಸೌಲಭ್ಯ ಕಲ್ಪಿಸಿದ್ದರು ಎಂಬುದನ್ನು ಮಾಜಿ ಶಾಸಕರು ತಿಳಿಸಲಿ. ಅಧಿಕಾರವಿದ್ದಾಗ ಸುಮ್ಮನೆ ನಮ್ಮ ಜಲ್ಲಿ ಕ್ರಷರ್‌ಗಳ ಮೇಲೆ ಅಕ್ರಮವೆಂದು ಕೇಸು ದಾಖಲಿಸಿದ್ದಾರೆ. ನನ್ನ ಮಾಲೀಕತ್ವದ ಜಲ್ಲಿ ಕ್ರಷರ್‌ಗೆ ಸಚಿವರನ್ನೇ ಕರೆತಂದಿದ್ದರು. ಆದರೆ ನನ್ನ ಜಲ್ಲಿ ಕ್ರಷರ್ ಉದ್ಯಮದಲ್ಲಿ ಅಕ್ರಮವಿರಲಿಲ್ಲ. ಇದನ್ನು ಅಂದಿನ ಸಚಿವರೂ ಮನಗಂಡಿದ್ದರು. ಈಗ ಮಾಜಿ ಶಾಸಕರಿಗೆ ಕಲ್ಲುಕುಟಿಕರ ಸಮಸ್ಯೆ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಹನುಮಂತಪ್ಪ, ಮುಖಂಡ ಹೆಚ್.ವಿ.ವಿನೋದ್‌ಗೌಡ, ಅಂಬರೀಶ, ಉಳ್ಳೇರಹಳ್ಳಿ ನಾರಾಯಣಸ್ವಾಮಿ, ಕದಿರೇನಹಳ್ಳಿ ರಮೇಶ್, ಒಬಟ್ಟಿ ಷಣ್ಮುಂಗ, ಹುಣಸೀಕೋಟೆಯ ಕೈವಾರ ನಾರಾಯಣಸ್ವಾಮಿ ಇದ್ದರು.