ಸಾರಾಂಶ
ವಿಚಾರಣೆ ನಡೆಸಿದ ಡಿವೈಎಸ್ಪಿ ಅವರು ಮೊದಲು ಆ ಪಿಎಗೆ ಪೇಪರ್, ಪೆನ್ನು ಕೊಟ್ಟು ಬರ್ಕೋ ಅಂದಿದ್ದಾರೆ. ಏನ್ ಬರಿಲಿ ಸಾರ್... ಎಂದರೆ, ಡಿವೈಎಸ್ಪಿ ಯಾರು ಎಂದು ಕೇಳಿದೆಯಲ್ವಾ, ನನ್ನ ಹೆಸರು ಬಾಲರಾಜ್ ಬರ್ಕೋ ಅಂದಿದ್ದಾರೆ.
ವಿಚಾರಣೆ ನಡೆಸಿದ ಡಿವೈಎಸ್ಪಿ ಅವರು ಮೊದಲು ಆ ಪಿಎಗೆ ಪೇಪರ್, ಪೆನ್ನು ಕೊಟ್ಟು ಬರ್ಕೋ ಅಂದಿದ್ದಾರೆ. ಏನ್ ಬರಿಲಿ ಸಾರ್... ಎಂದರೆ, ಡಿವೈಎಸ್ಪಿ ಯಾರು ಎಂದು ಕೇಳಿದೆಯಲ್ವಾ, ನನ್ನ ಹೆಸರು ಬಾಲರಾಜ್ ಬರ್ಕೋ ಅಂದಿದ್ದಾರೆ. ನಂತರ ತಾವು ಎಲ್ಲೆಲ್ಲಿ ಕೆಲಸ ಮಾಡಿದ್ದು ಅಂತ ಹೇಳಿ... ಬರ್ಕೋ ಅಂದಿದ್ದಾರೆ. ಇಷ್ಟಕ್ಕೆ ಪಿಎಗೆ ಒಂದು... ಎರಡು... ಮೂರು... ಎಲ್ಲಾ ಆರಂಭವಾಗಿದೆ. ಕಡೆಗೆ ಆತ ಕೊಬ್ಬು ಬಿಟ್ಟು ದಯನೀಯವಾಗಿ ಬೇಡಿಕೊಂಡು ಬಚಾವ್ ಆಗಿದ್ದಾನೆ.
ರಾಜಕಾರಣಿ ಪಿಎಗೆ ಬೆವರಳಿಸಿದ ಎಸ್‌ಐಟಿ
ಕೆಲ ರಾಜಕಾರಣಿಗಳ ಹಿಂದೆ ಮುಂದೆ ಓಡಾಡುವ ಆಪ್ತ ಸಹಾಯಕರಿದ್ದರಲ್ಲ (ಪಿಎ) ತಾವು ಸಿಕ್ಕಾಪಟ್ಟೆ ಪವರ್‌ಫುಲ್ ಅಂದುಕೊಂಡ್ಬಿಟ್ಟಿದ್ದಾರೆ.
ಸರ್ಕಾರಿ ಅಧಿಕಾರಿ ಇರಲಿ, ಸ್ಥಳೀಯ ಲೀಡರ್ ಸೇರಿ ಯಾರೇ ಎದುರು ಬಂದರೂ ಗೌರವ ನೀಡುವ ಕನಿಷ್ಟ ಪ್ರಜ್ಞೆಯೂ ಇರುವುದಿಲ್ಲ. ಇಂತಹುದೇ ಒಬ್ಬ ಪಿಎ ನಾಡಿನ ಆಡಳಿತ ಪಕ್ಷದ ಯುವ ರಾಜಕಾರಣಿಯ ಮಗನಿಗೂ ಇದ್ದಾನೆ. ಮಜಾ ಎಂದರೆ, ಈ ರಾಜಕಾರಣಿಯ ಮಗ ಯಾವುದೋ ಒಂದು ಕೇಸಿಗೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ತನಿಖಾ ವ್ಯಾಪ್ತಿಗೆ ಸಿಲುಕಿಬಿಟ್ಟಿದ್ದ.
ಹೀಗೇ ಸಿಲುಕಿದ್ದ ರಾಜಕಾರಣಿಯ ಪುತ್ರನಿಗೆ ನೋಟಿಸ್ ನೀಡಲು ಎಸ್‌ಐಟಿಯ ಸಬ್ ಇನ್ಸ್‌ಪೆಕ್ಟರ್ ಹೋಗಿದ್ದರು. ಎದುರಾದ ಪಿಎಗೆ ರಾಜಕಾರಣಿ ಪುತ್ರನಿಗೆ ನೋಟಿಸ್ ನೀಡಬೇಕು ಎಂದಿದ್ದೇ ತಡ ಆ ಪಿಎ ಆರ್ಭಟಿಸಿಬಿಟ್ಟಿದ್ದಾನೆ. ಯಾರ್‍ರೀ ಅದು ನೋಟಿಸ್ ಕೋಡೋದು ಅಂತ ಪ್ರಶ್ನಿಸಿದ್ದಾನೆ. ನಮ್ಮ ಡಿವೈಎಸ್‌ಪಿ ಸಾಹೇಬರು ಹೇಳಿದರು ಎಂದು ಪಿಎಸ್ಐ ಹೇಳಿದರೆ, ಯಾರೀ ಅದೂ ಡಿವೈಎಸ್ಪಿ ಬಾಲರಾಜ್ ಅಂದ್ರೇ. ಯಾವ ಬ್ಯಾಚ್ ಅಂತೆಲ್ಲ ಪ್ರಶ್ನಿಸಿಬಿಟ್ಟಿದ್ದಾನೆ.
ಕಡೆಗೆ ಪಿಎಸ್ಐ ನೋಟಿಸ್ ನೀಡಿ ಬಂದು ನಡೆದ ವಿಚಾರವನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇಷ್ಟಾಗಿದ್ದೇ ತಡ ಎಸ್ಐಟಿಯಿಂದ ರಾಜಕಾರಣಿ ಪುತ್ರನ ಜತೆಗೆ ಆತನ ಪಿಎಗೂ ನೋಟಿಸ್ ಹೋಗಿದೆ. ಆ ನೋಟಿಸ್‌ಗೂ ಪಿಎ ಕೊಬ್ಬು ತೋರಿಸಲೆತ್ನಿಸಿದ್ದಾನೆ. ಆಗ ಪೊಲೀಸರು ತಮ್ಮ ಬುದ್ಧಿ ತೋರಿಸಿ ನೀನು ಬಾರದೆ ಹೋದರೆ ಮನೆಗೆ ಬಂದು ಕರೆತರುತ್ತೇವೆ ಎಂದು ಗುಟುರು ಹಾಕಿದ್ದಾರೆ. ಮೆತ್ತಗಾದ ಪಿಎ ಕಡೆಗೂ ಸಿಐಡಿ ಕಚೇರಿಯಲ್ಲಿನ ಎಸ್ಐಟಿ ಕೊಠಡಿಗೆ ಬಂದಿದ್ದಾನೆ.
ಆಗ ಆತನ ವಿಚಾರಣೆ ನಡೆಸಿದ ಡಿವೈಎಸ್ಪಿ ಅವರು ಮೊದಲು ಆ ಪಿಎಗೆ ಪೇಪರ್ ಪೆನ್ನು ಕೊಟ್ಟು ಬರ್ಕೋ ಅಂದಿದ್ದಾರೆ. ಏನ್ ಬರಿಲಿ ಸಾರ್... ಎಂದರೆ, ಡಿವೈಎಸ್ಪಿ ಯಾರು ಎಂದು ಕೇಳಿದೆಯಲ್ವಾ, ನನ್ನ ಹೆಸರು ಬಾಲರಾಜ್ ಬರ್ಕೋ ಅಂದಿದ್ದಾರೆ. ನಂತರ ತಾವು ಎಲ್ಲೆಲ್ಲಿ ಕೆಲಸ ಮಾಡಿದ್ದು ಅಂತ ಹೇಳಿ... ಬರ್ಕೋ ಅಂದಿದ್ದಾರೆ. ಇಷ್ಟಕ್ಕೆ ಪಿಎಗೆ ಒಂದು... ಎರಡು... ಮೂರು... ಎಲ್ಲಾ ಆರಂಭವಾಗಿದೆ. ಕಡೆಗೆ ಆತ ಕೊಬ್ಬು ಬಿಟ್ಟು ದಯನೀಯವಾಗಿ ಬೇಡಿಕೊಂಡು ಬಚಾವ್ ಆಗಿದ್ದಾನೆ.
ಈ ಘಟನೆ ಬಳಿಕ ಎಸ್‌ಐಟಿಯವರು ಕರೆ ಮಾಡಿದರೆ ಸಾಕು, ಆ ಪಿಎ ಎಸ್ ಸಾರ್... ಎಂದು ಕರುಬುತ್ತಾನಂತೆ.
ಪೂಜಾ ಭಾಷಣಕ್ಕೆ ಗೌಡರು ‘ಫಿದಾ’
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರು, " ನನಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುತ್ತೇನೆ ಎಂದರೆ ಸಾರಾಸಗಟಾಗಿ ತಿರಸ್ಕರಿಸುತ್ತೇನೆ " ಎಂದು ಮೊನ್ನೆ ಘೋಷಿಸಿದರು. ಇದು.. ಇದು... ಕನ್ನಡತನ ಎಂದರೆ ಎಂದು ಕನ್ನಡಿಗರು ಖುಷಿ ಪಡುವ ವೇಳೆಗೆ ಮಾತು ಮುಂದುವರೆಸಿದ ನಾರಾಯಣ ಗೌಡರು, "ನನಗೆ ಎಂಎಲ್ಸಿ ಮಾಡುತ್ತೇನೆ ಎಂದರೆ ನಾನು ಅದನ್ನು ನಿರಾಕರಿಸಿ ನಟಿ ಪೂಜಾ ಗಾಂಧಿ ಅವರ ಹೆಸರು ಶಿಫಾರಸು ಮಾಡುತ್ತೇನೆ " ಎಂದು ಬಿಟ್ಟರು.
ಈ ಮಾತು ಕೇಳಿದ ನಯನ ಸಭಾಂಗಣದ ಸಭಿಕರು ಖುಷಿಯಾಗಿಬಿಟ್ಟರು. ಅವರಿಗಿಂತ ದುಪ್ಪಟ್ಟು ಖುಷಿಯಾದ ನಟಿ ಪೂಜಾ ಗಾಂಧಿ, ಕರ್ನಾಟಕ, ಕನ್ನಡದ ಇತಿಹಾಸ, ಬೆಳೆದು ಬಂದ ದಾರಿಯನ್ನು ಸವಿವರವಾಗಿ ವಿವರಿಸತೊಡಗಿದರು. ಪೂಜಾ ಗಾಂಧಿ ಅವರ ಕನ್ನಡ ಉಚ್ಚರಣೆ, ಕನ್ನಡ ಪ್ರೀತಿಗೆ ಎಲ್ಲರೂ ಫಿದಾ ಆಗಿದ್ದರು. ಇದಕ್ಕೆ ನಾರಾಯಣ ಗೌಡರೂ ಹೊರತಾಗಿರಲಿಲ್ಲ.
ಮಧುವನ್ನು ಕಾಡಿದ ಡ್ರೋನ್ ಕ್ಯಾಮೆರಾ
ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಡ್ರೋನ್ ಕ್ಯಾಮರಾಗೂ ಏನು ಸಂಬಂಧ? ಅಕಸ್ಮಾತ್ ಸಂಬಂಧ ಇದ್ದರೂ ಅದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೆದರಿದ್ದು ಏಕೆ?
ಇಂತಹ ಕುತೂಹಲಕರ ಪ್ರಶ್ನೆಗಿದೋ ಉತ್ತರ. ಮೊನ್ನೆ ಏನಾಗಿತ್ತು ಅಂದರೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ತಯಾರಿಗೆ ಡಿಎಸ್‌ಇಆರ್‌ಟಿ ಕಚೇರಿಯಲ್ಲಿ ಸಂವಾದ ನಡೆಯಿತು. ಅದಾದ ಮೇಲೆ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿದರು.
ಕಳೆದ ಬಾರಿ ಕುಸಿತವಾಗಿದ್ದ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ಮಕ್ಕಳಲ್ಲಿ ಕಲಿಕಾ ಮಟ್ಟ ಸುಧಾರಣೆಗೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಅಂತ ಅವರು ವಿವರಣೆ ನೀಡಿದರು. ಬಳಿಕ ಮಾಧ್ಯಮದವರಿಂದ ಪ್ರಶ್ನೆಗಳು ಶುರುವಾದವು. ಪರೀಕ್ಷಾ ಅಕ್ರಮ ತಡೆಗೆ ಕಳೆದ ಬಾರಿ ಜಾರಿಗೊಳಿಸಿದ್ದ ಎಲ್ಲ ಪರೀಕ್ಷಾ ಕೊಠಡಿಯಲ್ಲೂ ಸಿಸಿ ಕ್ಯಾಮೆರಾ, ವೆಬ್‌ಕಾಸ್ಟಿಂಗ್ ವ್ಯವಸ್ಥೆಯಿಂದ ಫಲಿತಾಂಶ ಭಾರೀ ಮಟ್ಟದಲ್ಲಿ ಕುಸಿದಿತ್ತು. ಈ ಬಾರಿಯೂ ಈ ವ್ಯವಸ್ಥೆ ಇರುತ್ತಾ ಅಂದ್ರು.
ಅದಕ್ಕೆ ಸಚಿವರು ಹೌದು ಇರುತ್ತೆ. ಆದರೆ, ನಮ್ಮ ಮಕ್ಕಳಲ್ಲಿ ವೆಬ್‌ಕಾಸ್ಟಿಂಗ್ ಬಗ್ಗೆ ಭಯ ಹೋಗಲಾಡಿಸಲು ಹಲವು ಕ್ರಮ ಕೈಗೊಂಡಿದ್ದೇವೆ ಅಂದ್ರು. ಇದಕ್ಕೆ ಮಾಧ್ಯಮ ಪ್ರತಿನಿಧಿಯೊಬ್ಬರು ವೆಬ್‌ಕಾಸ್ಟಿಂಗ್‌ನಿಂದ ಪರೀಕ್ಷಾ ಕೊಠಡಿ ಒಳಗಿನ ಅಕ್ರಮಗಳಿಗೆ ತಡೆ ಬಿದ್ದಿರಬಹುದು. ಆದರೆ, ಪರೀಕ್ಷಾ ಕೇಂದ್ರದ ಹೊರಗೆ ಕಿಟಕಿ ಪಕ್ಕ ನಿಂತು ಮಕ್ಕಳಿಗೆ ಉತ್ತರ ಹೇಳಿಕೊಡುವಂತಹ ಪ್ರಯತ್ನಗಳು ನಿಂತಿಲ್ಲ ಎಂಬ ಆರೋಪಗಳಿವೆ.
ಇಂತಹ ಅಕ್ರಮ ತಡೆಯಲು ಪರೀಕ್ಷಾ ಕೇಂದ್ರಗಳ ಸುತ್ತ ಡ್ರೋನ್ ಕ್ಯಾಮೆರಾವನ್ನೇನಾದ್ರೂ ಹಾರಿಸ್ತೀರಾ ಅಂದ್ರು. ಹಂಗನ್ನುತ್ತಿದ್ದಂತೆ ಹೌಹಾರಿದ ಸಚಿವರು, ಕಳೆದ ಬಾರಿ ವೆಬ್‌ಕಾಸ್ಟಿಂಗ್ ಅಂತ ನಮ್ಮ ಮಕ್ಕಳು ಭಯ ಬಿದ್ದಿದ್ರು, ಈಗ ಡ್ರೋನ್-ಗೀನ್ ಅಂತ ಭಯ ಬೀಳುಸ್ಬೇಡ್ರಪ್ರೋ. ಆ ಪದನೇ ಯಾರೂ ನಿಮ್ಮ ಸುದ್ದಿಯಲ್ಲಿ ಬಳಸಬೇಡಿ ಅಂತ ಮನವಿ ಮಾಡಿಕೊಂಡ್ರು.
-ಗಿರೀಶ್ ಮಾದೇನಹಳ್ಳಿ
-ಸಿದ್ದು ಚಿಕ್ಕಬಳ್ಳೇಕರೆ
-ಲಿಂಗರಾಜು ಕೋರಾ