ಲೋಕಸಭೆ ಅಧಿವೇಶನ ಹಾಗೂ ರಾಜ್ಯದ ಬಜೆಟ್ ಅಧಿವೇಶನ ನಂತರ ಶೋಷಿತರ ಸಮಾವೇಶ : ಸಚಿವ ರಾಜಣ್ಣ

| N/A | Published : Feb 16 2025, 01:47 AM IST / Updated: Feb 16 2025, 04:07 AM IST

ಸಾರಾಂಶ

ಲೋಕಸಭೆ ಅಧಿವೇಶನ ಹಾಗೂ ರಾಜ್ಯದ ಬಜೆಟ್ ಅಧಿವೇಶನ ಮುಗಿದ ಬಳಿಕ ಶೋಷಿತರ ಸಮಾವೇಶವನ್ನು ಚಿತ್ರದುರ್ಗ, ಹುಬ್ಬಳ್ಳಿ, ದಾವಣಗೆರೆ ಭಾಗದಲ್ಲಿ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

 ತುಮಕೂರು :ಲೋಕಸಭೆ ಅಧಿವೇಶನ ಹಾಗೂ ರಾಜ್ಯದ ಬಜೆಟ್ ಅಧಿವೇಶನ ಮುಗಿದ ಬಳಿಕ ಶೋಷಿತರ ಸಮಾವೇಶವನ್ನು ಚಿತ್ರದುರ್ಗ, ಹುಬ್ಬಳ್ಳಿ, ದಾವಣಗೆರೆ ಭಾಗದಲ್ಲಿ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

ದಲಿತರ ಸಮಾವೇಶಕ್ಕೆ ಬ್ರೇಕ್‌ ಬಿದ್ದ ಬೆನ್ನಲ್ಲೇ ಆ ರ್‍ಯಾಲಿಯ ಹೆಸರನ್ನು ಶೋಷಿತರ ಸಮಾವೇಶ ಎಂದು ಬದಲಿಸಲಾಗಿದ್ದು, ಅದರ ಆಯೋಜನೆ ಸಂಬಂಧ ಮುಂಚೂಣಿಯಲ್ಲಿರುವ ಸಚಿವ ರಾಜಣ್ಣ ಅವರು ಮೂರು ದಿನಗಳ ಕಾಲ ದೆಹಲಿಯಲ್ಲಿ ಬೀಡುಬಿಟ್ಟು ಪಕ್ಷದ ಹಲವು ಹಿರಿಯ ನಾಯಕರನ್ನು ಭೇಟಿಯಾಗಿ ಮನವೊಲಿಸುವ ಪ್ರಯತ್ನ ಮಾಡಿ ವಾಪಸಾಗಿದ್ದಾರೆ. ಈ ಸಂಬಂಧ ಶನಿವಾರ ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ಭಾಗದ ಬದಲಾಗಿ ಚಿತ್ರದುರ್ಗ, ಹುಬ್ಬಳ್ಳಿ, ದಾವಣಗೆರೆ ಭಾಗದಲ್ಲಿ ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದೆ. ಇಲ್ಲಿ ಸಮಾವೇಶ ಮಾಡಿದರೆ ಜನರು ಬರಲು ಅನುಕೂಲವಾಗಲಿದೆ ಎಂದು ಹೇಳಿದರು.

ಇದು ದಲಿತ ಮುಖ್ಯಮಂತ್ರಿ ಬೇಡಿಕೆಗಾಗಿ ಮಾಡುತ್ತಿರುವ ಸಮಾವೇಶ ಅಲ್ಲ ಎಂದೂ ಸ್ಪಷ್ಟಪಡಿಸಿದ ರಾಜಣ್ಣ ಅವರು, ಶೋಷಿತರ ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯುವುದಕ್ಕಾಗಿ ಮಾಡುತ್ತಿರುವ ಸಮಾವೇಶ ಎಂದರು.

ಕಾಂಗ್ರೆಸ್‌ ಪಕ್ಷದಿಂದಲೇ ಶೋಷಿತರ ಸಮಾವೇಶ ಸಂಘಟನೆ ಮಾಡಲಾಗುತ್ತಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಕೆಪಿಸಿಸಿ ಅಧ್ಯಕ್ಷರು ಸೇರಿ ಪಕ್ಷದ ಎಲ್ಲ ನಾಯಕರನ್ನು ಸಮಾವೇಶಕ್ಕೆ ಆಹ್ವಾನಿಸಲಾಗುವುದು ಎಂದು ಹೇಳಿದರು.

- ಚಿತ್ರದುರ್ಗ, ಹುಬ್ಬಳ್ಳಿ, ದಾವಣಗೆರೆಯಲ್ಲಿ ಆಯೋಜನೆ?- ದಲಿತ ಸಿಎಂ ಬೇಡಿಕೆಗಾಗಿ ಈ ರ್‍ಯಾಲಿ ಮಾಡ್ತಿಲ್ಲ: ಸಚಿವ

- ದೆಹಲಿಯಲ್ಲಿ ಮೂರು ದಿನ ಬೀಡುಬಿಟ್ಟು ಕಾಂಗ್ರೆಸ್‌ ನಾಯಕರನ್ನು ಭೇಟಿಯಾಗಿ ವಾಪಸಾಗಿರುವ ರಾಜಣ್ಣ- ಲೋಕಸಭೆ ಅಧಿವೇಶನ ಹಾಗೂ ರಾಜ್ಯ ಬಜೆಟ್‌ ಕಲಾಪದ ಬಳಿಕ ಸಮಾವೇಶ ನಡೆಸುವ ಕುರಿತು ಮಾಹಿತಿ- ಮೈಸೂರು ಭಾಗದ ಬದಲು ಬೇರೆ ಕಡೆ ಆಯೋಜನೆ. ಮೂರು ಸ್ಥಳಗಳಲ್ಲಿ ಏರ್ಪಾಟಿಗೆ ಚಿಂತನೆ ಎಂದು ವಿವರ- ಕಾಂಗ್ರೆಸ್‌ ಪಕ್ಷದಿಂದಲೇ ಸಮಾವೇಶ ಆಯೋಜನೆ. ಖರ್ಗೆ, ರಾಹುಲ್‌, ಡಿಕೆಶಿಗೂ ಆಹ್ವಾನಿಸುವುದಾಗಿ ಹೇಳಿಕೆ

ಕೆಪಿಸಿಸಿ ಅಧ್ಯಕ್ಷತೆ ಬಗ್ಗೆ ವರಿಷ್ಠರಿಗೆ ತಿಳಿಸಿದ್ದೇನೆ

ಮುಂದಿನ ಲೋಕಸಭೆ ಚುನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷರನ್ನು ಮುಂದುವರಿಸುವುದಾಗಿ 2023ರ ಮೇ 18ರಂದು ಪಕ್ಷದ ಹೈಕಮಾಂಡ್‌ ತಿಳಿಸಿತ್ತು. ವರಿಷ್ಠರನ್ನು ಭೇಟಿಯಾದ ವೇಳೆ ಇದನ್ನು ಗಮನಕ್ಕೆ ತಂದಿದ್ದೇನೆ. ಮುಂದಿನ ಲೋಕಸಭೆ ಚುನಾವಣೆ ಎಂದರೆ ಯಾವುದು ಎಂಬುದನ್ನು ಸ್ಪಷ್ಟಪಡಿಸಲು ಕೇಳಿದ್ದೇನೆ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ.- ಕೆ.ಎನ್‌. ರಾಜಣ್ಣ ಸಚಿವ