ಖರ್ಗೆ ವಾರ್ನಿಂಗ್‌ ಬೆನ್ನಲ್ಲೇ ಶಿಸ್ತಿನ ಪಕ್ಷವಾದ ಕಾಂಗ್ರೆಸ್‌ - ಹುದ್ದೆ ಬದಲಾವಣೆ ಚರ್ಚೆಗೆ ಬ್ರೇಕ್‌

| Published : Jan 19 2025, 02:15 AM IST / Updated: Jan 19 2025, 04:14 AM IST

Mallikarjun Kharge
ಖರ್ಗೆ ವಾರ್ನಿಂಗ್‌ ಬೆನ್ನಲ್ಲೇ ಶಿಸ್ತಿನ ಪಕ್ಷವಾದ ಕಾಂಗ್ರೆಸ್‌ - ಹುದ್ದೆ ಬದಲಾವಣೆ ಚರ್ಚೆಗೆ ಬ್ರೇಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಹೇಳಿಕೆ ನೀಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಬಹಿರಂಗ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಶಾಸಕರು, ಸಚಿವರು ಹಾಗೂ ನಾಯಕರು ಮೌನಕ್ಕೆ ಶರಣಾಗಿದ್ದಾರೆ.

 ಬೆಂಗಳೂರು : ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಹೇಳಿಕೆ ನೀಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಬಹಿರಂಗ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಶಾಸಕರು, ಸಚಿವರು ಹಾಗೂ ನಾಯಕರು ಮೌನಕ್ಕೆ ಶರಣಾಗಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗಳಿಂದ ಕೆಂಡಾಮಂಡಲರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ‘ಎಲ್ಲರೂ ಬಾಯಿ ಮುಚ್ಚಿಕೊಂಡು ಸುಮ್ಮನಿರಿ. ಮೊದಲು ನಿಮಗೆ ವಹಿಸಿರುವ ಕೆಲಸ ಸರಿಯಾಗಿ ಮಾಡಿ. ಹೈಕಮಾಂಡ್‌ ಸೂಚನೆ ಮೀರಿ ಮಾತನಾಡಿದರೆ ಹೈಕಮಾಂಡ್‌ ದುರ್ಬಲ ಅಲ್ಲ ಎಂಬುದನ್ನು ತೋರಿಸಬೇಕಾಗುತ್ತದೆ’ ಎಂದು ಶುಕ್ರವಾರ ಎಚ್ಚರಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಶನಿವಾರ ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನರ್ ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಲು ಕೈ ನಾಯಕರು ನಿರಾಕರಿಸಿದ್ದಾರೆ.

ಖರ್ಗೆ ಸೂಚನೆ ಸರಿಯಿದೆ:

ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವ ಮಾತು ನೂರಕ್ಕೆ ನೂರರಷ್ಟು ಸರಿ. ಎಲ್ಲರೂ ಅವರ ಮಾತು ಪಾಲನೆ ಮಾಡಬೇಕಿದೆ. ಶಿಸ್ತಿನ ಪಕ್ಷವನ್ನು ಸಂಘಟನೆ ಮಾಡಬೇಕು. ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಖರ್ಗೆ ಅವರ ಸೂಚನೆಯನ್ನು ನಾವೆಲ್ಲರೂ ಪಾಲನೆ ಮಾಡಬೇಕು ಎಂದಷ್ಟೇ ಹೇಳಿದರು.

ವಿವೇಚನೆ ಬಳಸಿ ಮಾತು-ಪ್ರಿಯಾಂಕ್‌:

ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ಬಗ್ಗೆ ಮಾತನಾಡಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಅನಗತ್ಯ ಹೇಳಿಕೆಗಳನ್ನು ನೀಡದಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಈಗಾಗಲೇ ಹೇಳಿದ್ದರು. ಅದನ್ನು ಎಐಸಿಸಿ ಅಧ್ಯಕ್ಷರು ಪುನರುಚ್ಚಾರ ಮಾಡಿದ್ದಾರೆ ಅಷ್ಟೇ. ಯಾರ ಬಾಯಿಗೂ ಬೀಗ ಹಾಕಲು ಆಗಲ್ಲ. ನಮ್ಮ ನಮ್ಮ ವಿವೇಚನೆ ಬಳಸಿ ನಾವು ಮಾತನಾಡಬೇಕು. ಮಾತಿನಿಂದ ಪಕ್ಷಕ್ಕೆ‌ ಹಾನಿ ಆಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

‘ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆ ಮಾತಿನ ಸೂಕ್ಷ್ಮತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವು ಯಾವುದೇ ಸ್ಥಾನಕ್ಕೆ ಗೆದ್ದರೂ ಅದು ಪಕ್ಷದ ಬಿ ಫಾರಂನಿಂದಲೇ ಗೆದ್ದಿರುತ್ತೇವೆ. ಅಧಿಕಾರ ಸಿಕ್ಕ ಮೇಲೆ ಯಾವ ಕಾಂಗ್ರೆಸ್ ಪಾರ್ಟಿ, ಎಐಸಿಸಿ ಅಧ್ಯಕ್ಷರ ಯಾರು? ರಾಹುಲ್ ಗಾಂಧಿ ಯಾರು? ಹೈಕಮಾಂಡ್ ಏನು ಮಾಡುತ್ತದೆ ಎನ್ನುವುದು ಸರಿಯಲ್ಲ. ಪಕ್ಷದ ನಾಯಕರ ಸೂಚನೆಯಂತೆ ನಾವು ಕೆಲಸ ಮಾಡಬೇಕು’ ಎಂದರು.