ಸಾರಾಂಶ
ತಾಲೂಕಿನ ಕಂದವಾರ ಗ್ರಾಮದ ಸರ್ವೇ ನಂಬರ್ ಒಂದರಲ್ಲಿನ 17.12 ಗುಂಟೆ ಜಮೀನು ಸರ್ಕಾರಿ ಶಾಲೆಗೆ ಸೇರಿದ್ದಾಗಿದ್ದು ವಕ್ಫ್ ಮಂಡಳಿಗೆ ಸೇರಿಲ್ಲ, ಪಹಣಿಯಲ್ಲಿದ್ದ ತಾಂತ್ರಿಕ ದೋಷವನ್ನು ತ್ವರಿತವಾಗಿ ಸರಿಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂಸಿ ಸುಧಾಕರ್ ಸ್ಪಷ್ಟನೆ
ಚಿಕ್ಕಬಳ್ಳಾಪುರ : ತಾಲೂಕಿನ ಕಂದವಾರ ಗ್ರಾಮದ ಸರ್ವೇ ನಂಬರ್ ಒಂದರಲ್ಲಿನ 17.12 ಗುಂಟೆ ಜಮೀನು ಸರ್ಕಾರಿ ಶಾಲೆಗೆ ಸೇರಿದ್ದಾಗಿದ್ದು ವಕ್ಫ್ ಮಂಡಳಿಗೆ ಸೇರಿಲ್ಲ, ಪಹಣಿಯಲ್ಲಿದ್ದ ತಾಂತ್ರಿಕ ದೋಷವನ್ನು ತ್ವರಿತವಾಗಿ ಸರಿಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂಸಿ ಸುಧಾಕರ್ ಸ್ಪಷ್ಟನೆ ನೀಡಿದರು.
ಸೋಮವಾರ ನಗರದ ಹೊರವಲಯದಲ್ಲಿರುವ ಜಿಲ್ಲಾ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಂದವಾರ ಗ್ರಾಮದ ಸರ್ವೇ ನಂಬರ್ ಒಂದರಲ್ಲಿನ 19 ಗುಂಟೆ ಜಮೀನಿನ ಪೈಕಿ 17.12 ಗುಂಟೆ ಜಮೀನು ಸರ್ಕಾರಿ ಶಾಲೆಗೂ ಹಾಗೂ 1.04 ಗುಂಟೆ ಜಮೀನು ವಕ್ಪ್ ಮಂಡಳಿಯ ದರ್ಗಾಕ್ಕೂ ಸೇರಿದ್ದಾಗಿದೆ ಎಂದರು.
ಪಹಣಿ ದೋಷ ತಿದ್ದುಪಡಿ
ಆದರೆ ತಾಂತ್ರಿಕ ದೋಷದಿಂದ ಪಹಣಿಯಲ್ಲಿ ತಪ್ಪು ನಮೂದಾಗಿತ್ತು. ಈ ಬಗ್ಗೆ ನಮ್ಮ ಗಮನಕ್ಕೆ ಬಂದ ತಕ್ಷಣವೇ ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿತ್ತು, ಅದರಂತೆ ಅಧಿಕಾರಿಗಳು ತ್ವರಿತ ಕ್ರಮವಹಿಸಿ ಪಹಣಿಯಲ್ಲಿದ್ದ ದೋಷವನ್ನು ಸರಿಪಡಿಸಿದ್ದಾರೆ ಎಂದು ತಿಳಿಸಿದರು. ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗ ಹೋಬಳಿಯ ತಿಮ್ಮಸಂದ್ರ ಗ್ರಾಮದ ಸರ್ವೆ ನಂಬರ್ 13/1, 13/2 ಮತ್ತು 13/3 ರ ಸರ್ವೇ ನಂಬರ್ ಗಳಿಗೆ ಸಂಬಂಧಿಸಿದ ಜಮೀನು ವಿವಾದವು 1974ರಿಂದ ಉಪವಿಭಾಗಾಧಿಕಾರಿಗಳ ನ್ಯಾಯಾಲಯ, ಜಿಲ್ಲಾಧಿಕಾರಿಗಳ ನ್ಯಾಯಾಲಯ ಹಾಗೂ ವಕ್ಫ್ ಮಂಡಳಿಯ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಾಗಿ ವಾದ ಪ್ರತಿವಾದ ಸುದೀರ್ಘವಾಗಿ ನಡೆದರೂ ಈ ವರೆಗೂ ಅಂತ್ಯ ಕಂಡಿಲ್ಲ ಎಂದರು.
ಕೋರ್ಟ್ ತೀರ್ಪಿಗೆ ಬದ್ಧ
ಈಗ ಹೈಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದೆ. ಘನ ನ್ಯಾಯಾಲಯವು ನೀಡುವ ತೀರ್ಪಿಗೆ ಒಳಪಟ್ಟು ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸುತ್ತದೆ. ಇಂತಹ ವಿಚಾರಗಳಲ್ಲಿ ಸಮುದಾಯಗಳ ನಡುವೆ ಸಂಘರ್ಷ ತಂದಿಡಲು ಕೆಲವರು ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಸಂಘರ್ಷದ ಬದಲಾಗಿ ಸಾಮರಸ್ಯವನ್ನು ನಾವೆಲ್ಲರೂ ಸೇರಿ ನಿರ್ಮಿಸಬೇಕು. ಸಾರ್ವಜನಿಕರು ನೈಜ ವಿಷಯಗಳನ್ನು ಅರಿತು ಜಿಲ್ಲಾಡಳಿತದ ಕ್ರಮಗಳಿಗೆ ಕೈಜೋಡಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ 40 ಸಾವಿರ ಎಕರೆಗೂ ಹೆಚ್ಚಿನ ಜಮೀನನ್ನು ಪರಿಭಾವಿತ ಅರಣ್ಯದ ವ್ಯಾಪ್ತಿಗೆ ಸೇರ್ಪಡಿಸಲಾಗಿದೆ. ಈ ಜಮೀನಿನ ಪೈಕಿ ಕೆಲವು ಜಮೀನುಗಳು ರೈತರಿಗೆ ನಿಯಮಾವಳಿ ರೀತ್ಯಾ ಮಂಜೂರಾಗಿ ಪಹಣಿಗಳಲ್ಲಿ ರೈತರ ಹೆಸರು ಮತ್ತು ಪರಿಭಾವಿತ ಅರಣ್ಯ ವಲಯ ಎಂದು ಬರುತ್ತಿರುವ ಸಮಸ್ಯೆಯು ಜಿಲ್ಲಾಡಳಿತದ ಗಮನಕ್ಕಿದ್ದು ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರದ ಮಟ್ಟದಲ್ಲಿ ಹಲವು ಯುಕ್ತ ಕ್ರಮಗಳನ್ನು ಕಳೆದ ಒಂದು ವರ್ಷದಿಂದಲೂ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮೀಸಲು ಅರಣ್ಯ ವಿವಾದ
ಈ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿದೆ. ಇದು ನ್ಯಾಯಾಲಯದಲ್ಲಿಯೇ ಬಗೆಹರಿಯ ಬೇಕಾಗಿರುವುದರಿಂದ ಘನ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ದಾಖಲೆಗಳು ಮತ್ತು ಮಾಹಿತಿಗಳನ್ನು ಕ್ರೂಢೀಕರಿಸಿ ಸಲ್ಲಿಸುವ ಸಂಬಂಧ ಸಕಲ ಸಿದ್ಧತೆಗಳನ್ನು ಹಾಗೂ ಯುಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೈತರು ಯಾವುದೇ ರೀತಿಯ ಸಮಸ್ಯೆಗಳಿಗೆ ಸಿಲುಕದಂತೆ ಕ್ರಮವಹಿಸಲು ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡುತ್ತದೆ. ಯಾವುದೇ ರೈತರು ಹೆಚ್ಚಿನ ಆತಂಕಕ್ಕೆ ಒಳಗಾಗಬಾರದು ಎಂದು ಸಚಿವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಪ್ರದೀಪ್ ಈಶ್ವರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೇಶವರೆಡ್ಡಿ, ಮುಖಂಡರಾದ ಗಂಗರೆ ಕಾಲುವೆ ನಾರಾಯಣಸ್ವಾಮಿ,ಅಡ್ಡಗಲ್ ಶ್ರೀಧರ್,ರಾಜಶೇಖರ್(ಬುಜ್ಜಿ), ಮಿಲ್ಟನ್ ವೆಂಕಟೇಶ್, ವೆಂಕಟೇಶ್, ಷಾಹೀದ್, ಮತ್ತಿತರರು ಇದ್ದರು.