ಸಾರಾಂಶ
ರೈತರ ನೆಪದಲ್ಲಿ ನಾಲೆಗೆ ನೀರು ಹರಿಸುವ ನೆಪದಲ್ಲಿ ತಮಿಳುನಾಡಿಗೆ ಸರ್ವ ಪಕ್ಷ ಸಭೆ ಕರೆಯುವ ಮೊದಲೇ ನೀರು ಹರಿಸಿದ್ದಾರೆ. ನೀರು ಬಿಟ್ಟ ಬಳಿಕ ಸಭೆ ಕರೆದರೆ ಹೋಗಿ ಏನು ಮಾಡೋದು?
ನವದೆಹಲಿ : ರೈತರ ನೆಪದಲ್ಲಿ ನಾಲೆಗೆ ನೀರು ಹರಿಸುವ ನೆಪದಲ್ಲಿ ತಮಿಳುನಾಡಿಗೆ ಸರ್ವ ಪಕ್ಷ ಸಭೆ ಕರೆಯುವ ಮೊದಲೇ ನೀರು ಹರಿಸಿದ್ದಾರೆ. ನೀರು ಬಿಟ್ಟ ಬಳಿಕ ಸಭೆ ಕರೆದರೆ ಹೋಗಿ ಏನು ಮಾಡೋದು? ಗೊಡಂಬಿ, ಬಾದಾಮಿ ತಿನ್ನಲಿಕ್ಕೆ ಸಭೆಗೆ ಹೋಗಬೇಕಿತ್ತಾ? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಭಾನುವಾರ ಕರೆದಿದ್ದ ಸರ್ವಪಕ್ಷಗಳ ಸಭೆಗೆ ಗೈರಾದ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಸೋಮವಾರ ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಶಿಫಾರಸು ಹಿನ್ನೆಲೆಯಲ್ಲಿ ಸರ್ಕಾರದಿಂದ ಸರ್ವಪಕ್ಷ ಸಭೆ ಕರೆಯಲಾಗಿತ್ತು. ಈ ಸಭೆಗೂ ಮುನ್ನವೇ ತಮಿಳುನಾಡಿಗೆ ನೀರು ಹರಿದಿದೆ. ನೀರು ಬಿಟ್ಟ ಬಳಿಕ ಕಾಟಾಚಾರಕ್ಕೆ ಸಭೆ ಕರೆದಿದ್ದಾರೆ. ಹಾಗಿದ್ದರೆ ನೀರು ಬಿಟ್ಟಿದ್ದಕ್ಕೆ ಶಹಬ್ಬಾಸ್‌ಗಿರಿ ಕೊಡಲು ಹೋಗಬೇಕಾಗಿತ್ತಾ? ಎಂದು ಖಾರವಾಗಿ ಪ್ರಶ್ನಿಸಿದರು.
ನಾನು ಕಸವನ್ನೂ ಎತ್ತಿದ್ದೇನೆ, ಸಿನಿಮಾ ಡಬ್ಬವನ್ನೂ ಹೊತ್ತಿದ್ದೇನೆ
ತಮ್ಮನ್ನು ಕಸದ ಲಾರಿ ಓಡಿಸುತ್ತಿದ್ದವರು ಎಂಬ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನಾನು ಕಾರ್ಪೋರೆಷನ್ ಕಸವನ್ನೂ ಎತ್ತಿದ್ದೇನೆ, ಸಿನಿಮಾ ಡಬ್ಬಾವನ್ನೂ ಹೊತ್ತಿದ್ದೇನೆ. ನಮ್ಮ ಕಾಲದಲ್ಲಿ ಸಿಡಿ ಇರಲಿಲ್ಲ, ಕಂಡ ಕಂಡ ಕಡೆ ಕೊಳ್ಳೆ ಹೊಡೆದು ಜೀವನ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ಯಾವಾಗ ಎಲ್ಲಿಗೆ ಹೋಗಬೇಕು ಗೊತ್ತಿದೆ: ಪಾಂಡವಪುರದಲ್ಲಿ ಮತ ಕೊಟ್ಟ ಜನರಿಗೆ ಧನ್ಯವಾದ ಹೇಳಬೇಕಿತ್ತು, ಹೋಗಿದ್ದೆ. ಯಾವ ಸಂದರ್ಭದಲ್ಲಿ ಯಾವ ಕಾರ್ಯಕ್ರಮಕ್ಕೆ ಹೋಗಬೇಕು ಎಂಬುದು ನನಗೆ ಗೊತ್ತಿದೆ. ಅದಕ್ಕೆ ಇವರ ಅನುಮತಿ ಪಡೆಯಬೇಕಾ? ಎಂದರು.
ಭಾನುವಾರವೂ ಸಭೆ ನಡೆಸಿ ನನ್ನ ವಿರುದ್ಧ ದಾಖಲೆಗಾಗಿ ತಡಕಾಡಿದ್ದಾರೆ, ಸಣ್ಣ ಪುಟ್ಟ ಏನಾದರೂ ಸಿಗುತ್ತವಾ ಎಂದು ಹುಡುಕುತ್ತಿದಾರೆ ಎಂದು ಆರೋಪ ಮಾಡಿದ ಅವರು, ನಾವು ಯಾವುದೇ ಕಾರ್ಯಕ್ರಮ ಮಾಡಿದರೂ ಪ್ರಾಮಾಣಿಕವಾಗಿ ಮಾಡುತ್ತೇವೆ. ಇವರ ರೀತಿ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಮುಖ್ಯಮಂತ್ರಿ ಮಾಡಲು ಯಾರು ಇವರ ಹಿಂದೆ ನಿಂತರೋ ಅವರ ಬದುಕಲ್ಲೇ ಚೆಲ್ಲಾಟ ಆಡುತ್ತಿದ್ದಾರೆ. ಅವರು ಎಷ್ಟು ಶಾಪ ಹಾಕ್ತಿದ್ದಾರೆ ಗೊತ್ತಿದೆ ಎಂದರು.