ಬಿಜೆಪಿ ಶಾಸಕ ಎಸ್‌. ಟಿ. ಸೋಮಶೇಖರ್‌ ಅಡ್ಡಮತದಾನಕ್ಕೆ ಮೈತ್ರಿ ಆಕ್ರೋಶ

| Published : Feb 28 2024, 02:34 AM IST / Updated: Feb 28 2024, 03:56 PM IST

ಬಿಜೆಪಿ ಶಾಸಕ ಎಸ್‌. ಟಿ. ಸೋಮಶೇಖರ್‌ ಅಡ್ಡಮತದಾನಕ್ಕೆ ಮೈತ್ರಿ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಅಡ್ಡ ಮತದಾನದ ಸುದ್ದಿ ಹೊರಬೀಳುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಶಾಸಕ ಎಸ್.ಟಿ. ಸೋಮಶೇಖರ್‌ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಅಡ್ಡಮತ ಹಾಕಿದ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಅಡ್ಡಮತದಾನದ ಸುದ್ದಿ ಹೊರಬೀಳುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಶಾಸಕ ಎಸ್.ಟಿ. ಸೋಮಶೇಖರ್‌ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಎಚ್‌.ಎಂ. ರಮೇಶ್‌ಗೌಡ ನೇತೃತ್ವದಲ್ಲಿ ಜೆಡಿಎಸ್‌ ಕಾರ್ಯಕರ್ತರು ಜೆ.ಪಿ. ಭವನದ ಬಳಿ ಪ್ರತಿಭಟನೆ ನಡೆಸಿದರು.

ಬಿಜೆಪಿಯಿಂದ ಗೆದ್ದಿದ್ದ ಎಸ್‌.ಟಿ.ಸೋಮಶೇಖರ್‌ ರಾಜಕೀಯ ಸ್ವಾರ್ಥಕ್ಕಾಗಿ ಪಕ್ಷಕ್ಕೆ ದ್ರೋಹ ಎಸೆಗಿದ್ದಾರೆ ಎಂದು ಕಿಡಿಕಾರಿದರು. ಈ ವೇಳೆ ರೊಚ್ಚಿಗೆದ್ದ ಕೆಲ ಕಾರ್ಯಕರ್ತರು ಎಸ್‌.ಟಿ.ಸೋಮಶೇಖರ್‌ ಪ್ರತಿಕೃತಿ ದಹಿಸಿ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರಮೇಶ್ ಗೌಡ, ಶಾಸಕ ಎಸ್.ಟಿ. ಸೋಮಶೇಖರ್ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ವಿಧಾನಸಭೆ ಸ್ಪೀಕರ್ ಅವರು ಅನರ್ಹಗೊಳಿಸಬೇಕು. ಅಡ್ಡಮತ ಹಾಕಲು ಅವರು ಕಾಂಗ್ರೆಸ್ ನಿಂದ 25 ಕೋಟಿ ರು. ಹಣ ಪಡೆದಿದ್ದಾರೆ ಎಂದು ಆರೋಪಿಸಿದರು.

ಒಂದು ವೇಳೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸದಿದ್ದರೆ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು. ಬುಧವಾರದಿಂದಲೇ ಬೆಂಗಳೂರು ನಗರದ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಮಂಡಲ ಕಚೇರಿ ಬಳಿ ಪ್ರತಿಭಟನೆ: ಯಶವಂತಪುರ ಬಿಜೆಪಿ ಮಂಡಲ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ಶಾಸಕ ಎಸ್‌.ಟಿ. ಸೋಮಶೇಖರ್‌ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು, ಮುಖಂಡರು ಸಹ ಭಾಗಿಯಾಗಿದ್ದರು.

ಅಂತೆಯೆ ಯಶವಂತಪುರದಲ್ಲಿರುವ ಎಸ್‌.ಟಿ.ಸೋಮಶೇಖರ್‌ ಕಚೇರಿ ಬಳಿಯೂ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸೋಮಶೇಖರ್‌ ಭಾವಚಿತ್ರಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾರ್ಯಕರ್ತರು ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಕಿಡಿಕಾರಿದರು.

ಮನೆಗೆ ಭದ್ರತೆ: ಶಾಸಕ ಎಸ್‌.ಟಿ.ಸೋಮಶೇಖರ್‌ ಅವರ ಬಿಟಿಎಂ ನಿವಾಸದ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಹಾಕಿದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಶಾಸಕರ ನಿವಾಸದ ಬಳಿ ಪ್ರತಿಭಟನೆ, ಮುತ್ತಿಗೆ ಹಾಕುವ ಸಾಧ್ಯತೆಯಿತ್ತು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸೋಮಶೇಖರ್‌ ನಿವಾಸದ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.