ಸಾರಾಂಶ
ಐಟಿ ಕಾರಿಡಾರ್ ಬೆಳ್ಳಂದೂರು, ಸರ್ಜಾಪುರವನ್ನು ಸಂಪರ್ಕಿಸುವ ಔಟರ್ ರಿಂಗ್ ರೋಡ್‌ನಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ವಿಪ್ರೋ ಕ್ಯಾಂಪಸ್‌ನ ಒಳಗೆ ಸೀಮಿತ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಐಟಿ ಕಾರಿಡಾರ್ ಬೆಳ್ಳಂದೂರು, ಸರ್ಜಾಪುರವನ್ನು ಸಂಪರ್ಕಿಸುವ ಔಟರ್ ರಿಂಗ್ ರೋಡ್‌ನಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ವಿಪ್ರೋ ಕ್ಯಾಂಪಸ್‌ನ ಒಳಗೆ ಸೀಮಿತ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.ಇಬ್ಬಲೂರು ಜಂಕ್ಷನ್‌ನಲ್ಲಿ ದಟ್ಟಣೆಯ ಅವಧಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದು ವಾಹನಗಳ ಸಂಚಾರ, ಉತ್ಪಾದಕತೆ ಮತ್ತು ನಗರ ಜೀವನ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದನ್ನು ತಪ್ಪಿಸಲು ಪರಸ್ಪರ ಒಪ್ಪಿಗೆಯ ಷರತ್ತುಗಳೊಂದಿಗೆ ವಿಪ್ರೋ ಕ್ಯಾಂಪಸ್ ಒಳಗೆ ವಾಹನ ಸಂಚಾರಕ್ಕೆ ಅನುಮತಿ ನೀಡಬಹುದು. ಇದರಿಂದ ಔಟರ್ ರಿಂಗ್ ರೋಡ್ ಮತ್ತು ಸುತ್ತಲಿನ ರಸ್ತೆಗಳಲ್ಲಿ ಶೇ.30ರಷ್ಟು ದಟ್ಟಣೆ ಕಡಿಮೆಯಾಗುತ್ತದೆ ಎಂದು ನಗರ ಸಾರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಟ್ರಾಫಿಕ್ ದಟ್ಟಣೆ ನಿಯಂತ್ರಣಗೊಳಿಸಿ ವಾಹನ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ತಮ್ಮ ಪಾತ್ರ ಮಹತ್ವದ್ದಾಗಿದೆ. ಅಲ್ಲದೇ, ಬೆಂಗಳೂರನ್ನು ವಾಸಯೋಗ್ಯ ನಗರವಾಗಿಸುವಲ್ಲಿ ನೆರವಾಗಲಿದೆ. ಕ್ಯಾಂಪಸ್ ಒಳಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಿಮ್ಮ ತಂಡವು ನಮ್ಮ ಅಧಿಕಾರಿಗಳೊಂದಿಗೆ ಕುಳಿತು ಚರ್ಚಿಸಿ ಪರಸ್ಪರ ಒಪ್ಪಿಗೆಯ ನಿರ್ಧಾರಕ್ಕೆ ಬರುವಂತಾದರೆ ನನಗೆ ಸಂತೋಷವಾಗುತ್ತದೆ ಎಂದು ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.