ಸಾರಾಂಶ
ದಡದಹಳ್ಳಿಯಲ್ಲಿ ಆಲೂರು ವಾರ್ಷಿಕ ಮಹಾಸಭೆ ಉದ್ಘಾಟನೆ । ಮಾಜಿ ಶಾಸಕ ಪ್ರೀತಂ ಗೌಡ ಅಭಿಮತ
ಕನ್ನಡಪ್ರಭ ವಾರ್ತೆ ಆಲೂರುಆಲೂರು ತಾಲೂಕು ಹಾಸನ ನಗರಕ್ಕೆ ಸಮೀಪವಿರುವುದರಿಂದ ತಾಲೂಕಿನ ಜನಸಾಮಾನ್ಯರು ಎಲ್ಲ ವ್ಯವಹಾರಗಳಿಗೂ ಹಾಸನ ನಗರವನ್ನು ಆಶ್ರಯಿಸುತ್ತಿರುವುದರಿಂದ ತಾಲೂಕು ಹಿಂದುಳಿಯಲು ಮುಖ್ಯ ಕಾರಣವೆನ್ನಬಹುದು ಎಂದು ಮಾಜಿ ಶಾಸಕ ಪ್ರೀತಮ್. ಜೆ. ಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ದಡದಹಳ್ಳಿ ಗ್ರಾಮದಲ್ಲಿ ದಿ.ಆಲೂರು ಕ್ಲಬ್ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮತ್ತು ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಿ ಆಲೂರು ಕ್ಲಬ್ ಸಾಂಸ್ಕೃತಿಕ ವೇದಿಕೆಯಾಗಿದ್ದು, ಕಳೆದೊಂದು ವರ್ಷಗಳಿಂದ ತಾಲೂಕಿನ ಜನಸಾಮಾನ್ಯರ ಪರವಾಗಿ ಕೆಲಸ ಮಾಡುವ ಮೂಲಕ ಗುರುತಿಸಿಕೊಂಡಿದೆ.ಆಲೂರು ತಾಲೂಕು ಸಕಲೇಶಪುರದ ಜೊತೆ ಕಟ್ಟಾಯ ವಿಧಾನಸಭೆ ಕ್ಷೇತ್ರಕ್ಕೆ ಸೇರಿರುವುದರಿಂದ ಸರ್ಕಾರದಿಂದ ಬರುವ ಅನುದಾನ ಮೂರು ಭಾಗಗಳಾಗಿ ಹಂಚಿ ಹೋಗುತ್ತಿದೆ. ಕಬ್ಬಿನಹಳ್ಳಿ ಜಗದೀಶ್ ರವರ ನೇತೃತ್ವದಲ್ಲಿ ಸ್ಥಾಪನೆಯಾಗಿರುವ ದಿ. ಆಲೂರು ಕ್ಲಬ್ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಕಾಂತರಾಜು ಮಾತನಾಡಿ, ಕ್ಲಬ್ ಮೂಲಕ ಉತ್ತಮವಾದ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ತಾಲೂಕಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸುವ ಕೆಲಸವಾಗಬೇಕು. ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಆರ್ಥಿಕವಾಗಿ ಹಿಂದುಳಿದಿದ್ದರೆ ಅಂತಹವರಿಗೆ ಸಹಾಯಹಸ್ತ ನೀಡಬೇಕು. ತಾಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎನ್ನುವ ಅಪವಾದವನ್ನು ಹೋಗಲಾಡಿಸುವ ಸಲುವಾಗಿ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ಪ್ರತ್ಯೇಕ ಕ್ಷೇತ್ರಕ್ಕೆ ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದರು.ದಿ.ಆಲೂರು ಕ್ಲಬ್ ಅಧ್ಯಕ್ಷ ಕಬ್ಬಿನಹಳ್ಳಿ ಜಗದೀಶ್ ಮಾತನಾಡಿ, ಸಂಘ ಸಾಕಷ್ಟು ಜನಪರ ಕೆಲಸ ಮಾಡಿದ್ದಲ್ಲದೆ, ಮುಂದಿನ ಒಂದು ವರ್ಷದೊಳಗೆ ಎಲ್ಲಾ ಪಕ್ಷದ ಮುಖಂಡರ ನೆರವಿನಿಂದ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಎಂ.ಕಾಂ.ನಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಗಾನವಿ, ಪ್ರಥಮ ದರ್ಜೆ ಗುತ್ತಿಗೆದಾರ ಹರೀಶ್ ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.ಎಚ್.ಪಿ.ಮೋಹನ್, ಕೆ.ಎಸ್.ಮಂಜೇಗೌಡ, ಹಾಸನ ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಜಗದೀಶ್, ಜಿಲ್ಲಾ ಪಂಚಾಯಿತಿ ಉಪ-ಕಾರ್ಯದರ್ಶಿ ಚಂದ್ರಶೇಖರ್, ಹೆಚ್ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗರಾಜ್, ಮುರಳಿ ಮೋಹನ್ ಉಪಸ್ಥಿತರಿದ್ದರು.
----ಆಲೂರು ಕಸಬಾ ದಡದಹಳ್ಳಿ ಗ್ರಾಮದಲ್ಲಿ ದಿ.ಆಲೂರು ಕ್ಲಬ್ ನೂತನ ಕಟ್ಟಡಕ್ಕೆ ಮಾಜಿ ಶಾಸಕ ಪ್ರೀತಮ್. ಜೆ. ಗೌಡ ಶಂಕುಸ್ಥಾಪನೆ ನೆರವೇರಿಸಿದರು. ಕ್ಲಬ್ ಅಧ್ಯಕ್ಷ ಕಬ್ಬಿನಹಳ್ಳಿ ಜಗದೀಶ್, ಕಾಂತರಾಜು, ಎಚ್.ಪಿ.ಮೋಹನ್, ಕೆ.ಎಸ್.ಮಂಜೇಗೌಡ, ಜಗದೀಶ್, ಚಂದ್ರಶೇಖರ್ ಉಪಸ್ಥಿತರಿದ್ದರು.