ಸಾರಾಂಶ
ಬೆಂಗಳೂರು : ಮಾತುಕತೆಗಾಗಿ ದೆಹಲಿಗೆ ಬನ್ನಿ ಎಂದು ದೂರವಾಣಿ ಮೂಲಕ ಆಹ್ವಾನ ನೀಡಿದ ಬಳಿಕ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಬಹಿರಂಗ ಹೇಳಿಕೆ ನೀಡಿದ್ದಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ಈ ಕಾರಣಕ್ಕಾಗಿಯೇ ಈಶ್ವರಪ್ಪ ಅವರು ಬುಧವಾರ ರಾತ್ರಿ ದೆಹಲಿಗೆ ತಲುಪಿದರೂ ಅಮಿತ್ ಶಾ ಅವರು ಭೇಟಿ ಮಾಡಲು ಬಯಸಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ ಅವರು ದೂರವಾಣಿ ಮೂಲಕ ಈಶ್ವರಪ್ಪ ಅವರೊಂದಿಗೆ ಮಾತನಾಡಿ ಸ್ಪರ್ಧೆಯ ನಿರ್ಧಾರದಿಂದ ಹಿಂದೆ ಸರಿಯುವಂತೆ ಸೂಚಿಸಿದರೂ ಒಪ್ಪಿರಲಿಲ್ಲ. ಹೀಗಾಗಿ, ಚರ್ಚೆ ನಡೆಸಲು ದೆಹಲಿಗೆ ಬನ್ನಿ ಎಂದಿದ್ದರು. ಅದಕ್ಕೆ ಈಶ್ವರಪ್ಪ ಅವರೂ ಒಪ್ಪಿದ್ದರು.
ಬಳಿಕ ಈಶ್ವರಪ್ಪ ಅವರು ಅಮಿತ್ ಶಾ ಅವರು ಮಾತುಕತೆಗೆ ಆಹ್ವಾನಿಸಿರುವುದನ್ನು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಬಹಿರಂಗಪಡಿಸಿದ್ದಲ್ಲದೆ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ದೆಹಲಿಯಲ್ಲಿ ಅಮಿತ್ ಶಾ ಸೇರಿದಂತೆ ಪಕ್ಷದ ವರಿಷ್ಠರನ್ನೇ ಮನವೊಲಿಸಿ ಬರುತ್ತೇನೆ. ಒಂದು ವೇಳೆ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಬದಲಿಸಿದರೆ ಮಾತ್ರ ಸ್ಪರ್ಧೆಯ ನಿರ್ಧಾರದಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದರು.
ಒಂದು ವೇಳೆ ಮಾತುಕತೆಯ ಬಳಿಕವೂ ಈಶ್ವರಪ್ಪ ಅವರು ಹಿಂದೆ ಸರಿಯದಿದ್ದರೆ ಹೈಕಮಾಂಡ್ ದುರ್ಬಲ ಎಂಬ ಸಂದೇಶ ರವಾನೆಯಾಗಬಹುದು ಎಂಬ ಕಾರಣಕ್ಕಾಗಿ ವರಿಷ್ಠರು ಮಾತುಕತೆ ನಡೆಸುವುದೇ ಬೇಡ ಎಂಬ ನಿಲವಿಗೆ ಬಂದರು ಎಂದು ತಿಳಿದು ಬಂದಿದೆ.