ಈಶ್ವರಪ್ಪ ದಿಲ್ಲಿಗೆ ಕರೆಸಿದ ಅಮಿತ್ ಶಾ : ಅಲ್ಲಿ ಏನಾಯ್ತು..?

| Published : Apr 04 2024, 01:18 AM IST / Updated: Apr 04 2024, 04:58 AM IST

ಸಾರಾಂಶ

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ನಿಶ್ಚಿತವಾಗಿದೆ.

 ಬೆಂಗಳೂರು/ನವದೆಹಲಿ :  ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ನಿಶ್ಚಿತವಾಗಿದೆ.ಮಾತುಕತೆ ಸಲುವಾಗಿ ದೆಹಲಿಗೆ ಬರುವಂತೆ ಆಹ್ವಾನಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕರೆಯ ಮೇರೆಗೆ ತೆರಳಿದ್ದ ಈಶ್ವರಪ್ಪ ಅವರಿಗೆ ನಿರಾಸೆ ಉಂಟಾಗಿದ್ದು, ದೆಹಲಿಗೆ ತಲುಪಿದ ಬ‍ಳಿಕ ಭೇಟಿ ಕಾರ್ಯಕ್ರಮ ರದ್ದಾಗಿದೆ ಎಂಬ ಮಾಹಿತಿ ಅಮಿತ್ ಶಾ ಅವರ ಕಚೇರಿಯಿಂದ ಬಂದಿದೆ.

ಮಂಗಳವಾರ ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ ಅವರು ದೂರವಾಣಿ ಮೂಲಕ ಈಶ್ವರಪ್ಪ ಅವರನ್ನು ಸಂಪರ್ಕಿಸಿ ಬುಧವಾರ ದೆಹಲಿಗೆ ಬರುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ಬುಧವಾರ ರಾತ್ರಿ ದೆಹಲಿಗೆ ತಲುಪಿದರು. ಆದರೆ, ಅಲ್ಲಿ ಹೋದ ಬಳಿಕ ಭೇಟಿ ಕಾರ್ಯಕ್ರಮ ಇಲ್ಲ. ನೀವು ವಾಪಸ್ ಹೋಗಬಹುದು ಎಂಬ ಅಮಿತ್ ಶಾ ಅವರ ಕಚೇರಿಯ ಸಂದೇಶ ಈಶ್ವರಪ್ಪ ಅವರನ್ನು ತಲುಪಿದೆ.

 ಹೀಗಾಗಿ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಈಶ್ವರಪ್ಪ ಅವರು ಗುರುವಾರ ಬೆಳಗ್ಗೆ ವಾಪಸಾಗಲಿದ್ದಾರೆ.ಅಮಿತ್ ಶಾ ಅವರ ಕರೆಯ ಬಳಿಕ ಈಶ್ವರಪ್ಪ ಅವರು, ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾಯಿಸಿದರೆ ಮಾತ್ರ ನಾನು ಸ್ಪರ್ಧಿಸುವುದಿಲ್ಲ ಎಂಬುದಾಗಿ ದೆಹಲಿಯಲ್ಲಿ ಹೇಳಿ ಬರುತ್ತೇನೆ ಎಂದು ಹೇಳಿಕೆ ನೀಡಿದ್ದರು. ಬಹುಶಃ ಈ ಹೇಳಿಕೆ ಹಿನ್ನೆಲೆಯಲ್ಲಿ ಭೇಟಿ ರದ್ದಾಗಿದೆ ಎನ್ನಲಾಗುತ್ತಿದೆ.

ಬಂಡಾಯ ಸ್ಪರ್ಧೆ ಆಶಯ ವರಿಷ್ಠರಿಗೆ ಇದ್ದಂತಿದೆ- ಈಶ್ವರಪ್ಪ:

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಅಮಿತ್‌ ಶಾ ಅವರ ಸೂಚನೆಯಂತೆ ನಾನು ದೆಹಲಿಗೆ ಬಂದೆ. ಇಲ್ಲಿಗೆ ಬಂದ ಬಳಿಕ ಅವರು ಸಿಗಲ್ಲ ಎಂಬ ಮಾಹಿತಿ ಗೃಹ ಸಚಿವರ ಕಚೇರಿಯಿಂದ ಬಂತು. ಹಾಗಿದ್ದರೆ ನಾನು ಬೆಂಗಳೂರಿಗೆ ಹೊರಡಲಾ ಎಂದು ಕೇಳಿದಾಗ, ಸರಿ ಹೊರಡಿ ಎಂಬ ಉತ್ತರ ಬಂತು. ಇದರರ್ಥ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ನಿಲ್ಲಲಿ ಎಂಬುದು ಅಮಿತ್‌ ಶಾ ಅಪೇಕ್ಷೆಯೂ ಇದ್ದಂತಿದೆ. ನಾನು ಬಂಡಾಯ ಅಭ್ಯರ್ಥಿಯಾಗಿ ನಿಂತು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಆಶೀರ್ವಾದ, ಎಲ್ಲರ ಸಹಕಾರದಿಂದ ಗೆದ್ದೇ ಗೆಲ್ಲುತ್ತೇನೆ. ಗೆದ್ದ ನಂತರ ಮೋದಿ ಕೈ ಬಲಪಡಿಸುತ್ತೇನೆ ಎಂದು ತಿಳಿಸಿದರು.

ಹಿಂದೆ ನಾನು ರಾಯಣ್ಣ ಬ್ರಿಗೇಡ್ ಕಟ್ಟಿದಾಗ ಅಮಿತ್‌ ಶಾ ಅವರ ಮಾತು ಕೇಳಿ ಸಂಘಟನೆ ನಿಲ್ಲಿಸಿದೆ. ಕುಟುಂಬ ಸದಸ್ಯರ ಸ್ಪರ್ಧೆ ವಿಚಾರದಲ್ಲಿ ನಮ್ಮ ಕುಟುಂಬಕ್ಕೊಂದು ನೀತಿ, ಬೇರೆಯವರ ಕುಟುಂಬಕ್ಕೊಂದು ನೀತಿ ಯಾಕೆ? ಹೀಗಾಗಿ ನಾನು ಈ ಬಾರಿ ಚುನಾವಣೆಗೆ ನಿಂತೇ ನಿಲ್ಲುತ್ತೇನೆ. ಯಾವುದೇ ಕಾರಣಕ್ಕೂ ನನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದರು.

ಅಮಿತ್‌ ಶಾ ಅವರು ಕರೆ ಮಾಡಿದಾಗಲೂ ನಾನು ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎಂಬ ನನ್ನ ನಿಲುವು ಸ್ಪಷ್ಟಪಡಿಸಿದ್ದೆ. ಆಗ ಶಾ ಅವರು ದೆಹಲಿಗೆ ಬನ್ನಿ, ಇದು ನನ್ನ ಮನವಿ ಅಂದಿದ್ದರು. ಆಗ ನೀವು ಹಿರಿಯರಿದ್ದೀರಿ, ಮನವಿ ಅನ್ನಬೇಡಿ. ನಾನೇ ಬಂದು ಭೇಟಿ ಮಾಡುತ್ತೇನೆ ಅಂದಿದ್ದೆ. ಅದರಂತೆ ಬಂದೆ. ಅವರು ಸಿಕ್ಕಿದ್ದರೂ ನನ್ನ ನಿಲುವು ಬದಲಿಸುತ್ತಿರಲಿಲ್ಲ. ಇದೀಗ ಅಮಿತ್ ಶಾ ಅವರ ಭೇಟಿ ಸಾಧ್ಯವಾಗಿಲ್ಲ. ಹೀಗಾಗಿ ನಾನು ಯಾರನ್ನೂ ಭೇಟಿ ಆಗುವುದೂ ಇಲ್ಲ ಎಂದು ಖಡಕ್ಕಾಗಿ ಹೇಳಿದರು.