ಸಾರಾಂಶ
‘2025ರ ಸೆ.17ಕ್ಕೆ ಪ್ರಧಾನಿ ನರೇಂದ್ರ ಮೋದಿಗೆ 75 ವರ್ಷ ತುಂಬುತ್ತದೆ. ಹೀಗಾಗಿ 2025ರ ಬಳಿಕ ಅವರು ಪ್ರಧಾನಿಯಾಗಿರುವುದಿಲ್ಲ. ಅಮಿತ್ ಶಾ ಪ್ರಧಾನಿಯಾಗಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ನವದೆಹಲಿ : 2025ರ ಸೆ.17ಕ್ಕೆ ಪ್ರಧಾನಿ ನರೇಂದ್ರ ಮೋದಿಗೆ 75 ವರ್ಷ ತುಂಬುತ್ತದೆ. ಹೀಗಾಗಿ 2025ರ ಬಳಿಕ ಅವರು ಪ್ರಧಾನಿಯಾಗಿರುವುದಿಲ್ಲ. ಅಮಿತ್ ಶಾ ಪ್ರಧಾನಿಯಾಗಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನೆಗೆ ಹೋಗಲಿದ್ದಾರೆ’ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಅಬಕಾರಿ ಹಗರಣದಲ್ಲಿ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಶುಕ್ರವಾರ ಬಿಡುಗಡೆಯಾದ ಕೇಜ್ರಿವಾಲ್ ಶನಿವಾರ ತಮ್ಮ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ‘ಬಿಜೆಪಿಯವರು ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಕೇಳುತ್ತಿರುತ್ತಾರೆ. ನಾನು ಅವರಿಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಯಾರೆಂದು ಕೇಳುತ್ತೇನೆ.
ಮೋದಿಗೆ 2025ರ ಸೆ.17ಕ್ಕೆ 75 ವರ್ಷ ತುಂಬಲಿದೆ. ಪಕ್ಷದ ನಾಯಕರು 75 ವರ್ಷಕ್ಕೆ ನಿವೃತ್ತಿಯಾಗಬೇಕು ಎಂದು ಅವರೇ ನಿಯಮ ಮಾಡಿದ್ದಾರೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಸುಮಿತ್ರಾ ಮಹಾಜನ್, ಯಶವಂತ್ ಸಿನ್ಹಾ ಆ ಕಾರಣಕ್ಕೇ ನಿವೃತ್ತಿಯಾಗಿದ್ದಾರೆ. ಈಗ ಮೋದಿ ಕೂಡ ಸೆ.17ಕ್ಕೆ ನಿವೃತ್ತಿಯಾಗಲಿದ್ದಾರೆ’ ಎಂದು ಹೇಳಿದರು.
‘ಮತ್ತೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಅವರು ಎರಡು ತಿಂಗಳ ಒಳಗೆ ಯೋಗಿ ಆದಿತ್ಯನಾಥ್ ಅವರನ್ನು ಕಿತ್ತೊಗೆಯುತ್ತಾರೆ. ನಂತರ ಅಮಿತ್ ಶಾ ಅವರನ್ನು ಪ್ರಧಾನಿ ಮಾಡುತ್ತಾರೆ. ಆದ್ದರಿಂದಲೇ ಮೋದಿಯವರು ಅಮಿತ್ ಶಾಗೆ ಮತ ಕೇಳುತ್ತಿದ್ದಾರೆ.
ಅಮಿತ್ ಶಾ ‘ಮೋದಿ ಕಿ ಗ್ಯಾರಂಟಿ’ಗಳನ್ನು ಈಡೇರಿಸುತ್ತಾರೆಯೇ? ಜನರು ಈ ಬಾರಿ ಬಿಜೆಪಿಗೆ ಮತ ಹಾಕಿದರೆ ಅದು ಮೋದಿಗೆ ಹೋಗುವುದಿಲ್ಲ, ಬದಲಿಗೆ ಅಮಿತ್ ಶಾ ಅವರಿಗೆ ಹೋಗುತ್ತದೆ’ ಎಂದು ಕೇಜ್ರಿವಾಲ್ ತಿಳಿಸಿದರು.
‘ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆಂದು ಮೋದಿ ಹೇಳುತ್ತಾರೆ. ಅವರು ಅರವಿಂದ ಕೇಜ್ರಿವಾಲ್‌ನಿಂದ ಕಲಿಯಬೇಕು. ನಾವು ಭ್ರಷ್ಟರನ್ನು ಜೈಲಿಗೆ ಕಳುಹಿಸಿದೆವು. ನಮ್ಮದೇ ಸಚಿವರನ್ನೂ ಜೈಲಿಗೆ ಹಾಕಿದೆವು. ಆದರೆ ಮೋದಿಯವರು ಆಪ್ ವಿರುದ್ಧ ದ್ವೇಷ ಸಾಧಿಸುವ ಯಾವ ಅವಕಾಶವನ್ನೂ ಕೈಬಿಡುತ್ತಿಲ್ಲ. ನಮ್ಮ ಪಕ್ಷದ ನಾಲ್ವರು ದೊಡ್ಡ ನಾಯಕರನ್ನು ಜೈಲಿಗೆ ಹಾಕಿದರು’ ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದರು.