ಸುಗಮ ಸಂಚಾರಕ್ಕೆ ಇನ್ನೂ 450 ಕಿ.ಮೀ. ರಸ್ತೆ ವೈಟ್‌ ಟಾಪಿಂಗ್‌: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

| N/A | Published : Feb 17 2025, 01:30 AM IST / Updated: Feb 17 2025, 04:17 AM IST

ಸಾರಾಂಶ

ರಸ್ತೆ ಗುಂಡಿ ಸಮಸ್ಯೆ ಹಾಗೂ ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಮುಂಬರುವ ದಿನಗಳಲ್ಲಿ ಇನ್ನೂ 450 ಕಿ.ಮೀ ಉದ್ದದ ರಸ್ತೆಯನ್ನು ವೈಟ್‌ಟಾಪಿಂಗ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

 ಬೆಂಗಳೂರು : ರಸ್ತೆ ಗುಂಡಿ ಸಮಸ್ಯೆ ಹಾಗೂ ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಮುಂಬರುವ ದಿನಗಳಲ್ಲಿ ಇನ್ನೂ 450 ಕಿ.ಮೀ ಉದ್ದದ ರಸ್ತೆಯನ್ನು ವೈಟ್‌ಟಾಪಿಂಗ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಭಾನುವಾರ ನಗರದ ವಿವಿಧ ರಸ್ತೆಗಳನ್ನು ವೈಟ್‌ಟಾಪಿಂಗ್‌ ಕಾಮಗಾರಿ ಪರಿಶೀಲನೆ ನಂತರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, ಸದ್ಯ ನಗರದಲ್ಲಿ ₹1700 ಕೋಟಿ ವೆಚ್ಚದಲ್ಲಿ 150 ಕಿ.ಮೀ ಉದ್ದದ 97 ರಸ್ತೆಗಳನ್ನು ವೈಟ್‌ ಟಾಪಿಂಗ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಆ ರಸ್ತೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಖಡಕ್‌ ಸೂಚನೆಯನ್ನು ನೀಡಿದರು.

ವಿವಿಧ ಕಡೆ ಪರಿಶೀಲನೆ:

ರಾಜಾಜಿನಗರ, ಮಹಾಲಕ್ಷೀ ಲೇಔಟ್‌, ಯಶವಂತಪುರ, ಗೊರಗುಂಟೆಪಾಳ್ಯ, ಆಶ್ರಮ ರಸ್ತೆ, ಬಸವನಗುಡಿಯ ಎನ್.ಆರ್.ಕಾಲೋನಿಯ ನೆಟ್ಟಕಲ್ಲಪ್ಪ ಸರ್ಕಲ್, ಹೆಬ್ಬಾಳದ ಆರ್.ಟಿ.ನಗರ ಸೇರಿದಂತೆ ವಿವಿಧ ಕಡೆ ಪರಿಶೀಲಿಸಿದ ಅವರು, ಒಟ್ಟು 14 ಪ್ಯಾಕೇಜ್‌ಗಳಲ್ಲಿ ನಗರದ 150 ಕಿ.ಮೀ ಉದ್ದದ 97 ರಸ್ತೆಗಳನ್ನು ವೈಟ್ ಟ್ಯಾಪಿಂಗ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಬೆಂಗಳೂರು ಜಲಮಂಡಳಿ, ಬಿಬಿಎಂಪಿ, ಬಿಡಿಎ, ಬೆಸ್ಕಾಂಗಳ ನಡುವೆ ಸಮನ್ವಯತೆ ಸಾಧಿಸಿ ಶಾಶ್ವತ ರಸ್ತೆ ನಿರ್ಮಿಸಲಾಗುತ್ತಿದೆ. ಕೇಬಲ್, ವಿದ್ಯುತ್‌ ತಂತಿಗಳಿಗೆ ಅವಕಾಶ ಕಲ್ಪಿಸಿ, ಯಾವುದೇ ಕಾರಣಕ್ಕೂ ರಸ್ತೆ ಅಗೆಯಲು ಅವಕಾಶ ನೀಡದೆ, ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಗುಣಮಟ್ಟದ ಕಾಮಗಾರಿ ಮುಖ್ಯ. ಕಾಮಗಾರಿ ಶೀಘ್ರಗತಿಯಲ್ಲಿ ಸಾಗಬೇಕೆಂದು ಪರಿಶೀಲನೆ ಮಾಡಿದ್ದೇನೆ. ಕಾಮಗಾರಿ ಪೂರ್ಣಕ್ಕೆ 11 ತಿಂಗಳು ಕಾಲಮಿತಿ ನಿಗದಿಪಡಿಸಲಾಗಿದೆ. ಮಳೆ ನೀರುಗಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮುಂದಾಗಿದ್ದೇವೆ. ಒಂದೇ ದಿನದಲ್ಲಿ ಎಲ್ಲ ಬದಲಾವಣೆ ಮಾಡುತ್ತೇವೆ ಎಂದು ಹೇಳುವುದಿಲ್ಲ. ಹಂತ ಹಂತವಾಗಿ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಯೋಜನೆ ಮಾಡುತ್ತಿದ್ದೇವೆ ಎಂದರು.

ಯೋಜನೆಗೆ ಮೀಸಲಿಟ್ಟಿರುವ ₹1,700 ಕೋಟಿ ರಸ್ತೆಗೆ ವೆಚ್ಚವಾಗಬೇಕು, ರಸ್ತೆ ನಿರ್ದಿಷ್ಟ ಪ್ರಮಾಣದಲ್ಲಿ ದಪ್ಪ ಇರಬೇಕು, ಈ ರಸ್ತೆಗಳಲ್ಲಿ ಜಲಮಂಡಳಿ ಕೆಲಸಗಳು ಒಟ್ಟಿಗೆ ಮುಗಿಯಬೇಕು. ಹೀಗಾಗಿ, ಪರಿಶೀಲನೆ ಮಾಡಿದ್ದೇನೆ. ಕಾಮಗಾರಿ ಮುಗಿದ ನಂತರವೂ ಗುಣಮಟ್ಟ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.

ಕಾಂಕ್ರಿಟ್‌ ದಪ್ಪ ಪರೀಕ್ಷಿಸಿದ ಡಿಸಿಎಂ:

ವೈಟ್‌ಟಾಪಿಂಗ್‌ ಕಾಮಗಾರಿ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವತಃ ತಾವೇ ಟೇಪ್‌ ಹಿಡಿದು ಕಾಂಕ್ರಿಟ್‌ ದಪ್ಪ ಪರಿಶೀಲಿಸಿದರು. ಒಟ್ಟು ಐದಾರು ಸ್ಥಳದಲ್ಲಿ ಟೇಪ್‌ ಹಿಡಿದು ಪರಿಶೀಲಿಸಿದರು. ಉತ್ತಮ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ. ಒಂದು ಕಡೆ ಸ್ವಲ್ಪ ವ್ಯತ್ಯಾಸ ಕಂಡುಬಂದಿದೆ. ತಾಂತ್ರಿಕ ತಂಡ ಕಳುಹಿಸಿ ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.

ಪರಿಶೀಲನೆ ವೇಳೆ ಸಚಿವರಾದ ಕೃಷ್ಣಬೈರೇಗೌಡ, ಬೈರತಿ ಸುರೇಶ್‌, ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಗೋಪಾಲಯ್ಯ, ರವಿ ಸುಬ್ರಹ್ಮಣ್ಯ, ಪರಿಷತ್‌ ಮಾಜಿ ಸದಸ್ಯ ಯು.ಬಿ.ವೆಂಕಟೇಶ್, ಕೆಪಿಸಿಸಿ ವಕ್ತಾರ ಡಾ। ಶಂಕರ್ ಗುಹಾ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮುನೀಶ್ ಮೌದ್ಗೀಲ್, ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್, ಉಪ ಮುಖ್ಯಮಂತ್ರಿಯ ಕಾರ್ಯದರ್ಶಿ ರಾಜೇಂದ್ರ ಚೋಳನ್ ಇದ್ದರು.

ಅಶ್ವಿನಿ ಹೇಳಿಕೆಗೆ ಡಿಕೆಶಿ ಕಿಡಿ:

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಬೆಂಗಳೂರಿನಲ್ಲಿ ಸುರಂಗ ರಸ್ತೆ ಮಾಡುವುದು ಸರಿಯಲ್ಲ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಹಾಗಿದ್ದರೆ ಅವರು ಮಹಾರಾಷ್ಟ್ರದಲ್ಲಿ ಯಾಕೆ ಸುರಂಗ ರಸ್ತೆ ಮಾಡಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಅವರಿಗೂ ಇದಕ್ಕೂ ಏನು ಸಂಬಂಧ. ಅವರ ಇಲಾಖೆ ಕೆಲಸ ಅವರು ಮಾಡಲಿ ಎಂದು ಹೇಳಿದರು,

ಕಾವೇರಿ ಸಂಪರ್ಕ ಪಡೆಯಲಿ

ಬೆಂಗಳೂರಿನಲ್ಲಿ ನೀರಿನ ಅಭಾವ ಎದುರಾಗಬಾರದು ಎಂಬ ಕಾರಣಕ್ಕೆ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದ್ದೇವೆ. ಜನರು ಮುಂದೆ ಬಂದು ಕಾವೇರಿ ನೀರಿನ ಸಂಪರ್ಕ ಪಡೆಯಬೇಕು.-ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ.